Follow on Twitter

Search it

Tuesday 27 December 2011

Jenkal Gudda-Ettina Bhuja Trek-Mudigere-Preparation-ಜೇನುಗುಡ್ಡ ಚಾರಣಕ್ಕೂ ಮುನ್ನ...



ಆ ಕಡೆಯಿಂದ ಹೊರಡೋದ ಅಥವಾ ಈ ಕಡೆಯಿಂದಾನಾ?
ಗೈಡ್ ಸಿಕ್ತಾರಾ ಅಥವಾ ನಾವೇ ಹೊಗ್ಬೇಕಾ?
ಮೂಡಿಗೆರೆಗೆ ಕಾಲ್ ಮಾಡಿದ್ದಾ ಏನಂದ್ರು?
ಇನ್ನೂ ಯಾರು ಓಕೆ ಅಂದಿಲ್ಲ ಏನ್ಮಾಡ್ಲಿ.. ಟೆಂಟ್ ಸಿಕ್ತಾ ....ಓಹ್.. ಒಂದಾ ಎರಡಾ ಪ್ರಶ್ನೆಗಳು ಟ್ರೆಕ್ಕಿಂಗ್ ಎಂದರೆ ಇಷ್ಟೆಲ್ಲ ಪ್ರಿಪ್ರೇಷನ್ ಇರುತ್ತೆ ಎನ್ನಿಸಿದ್ದು ಇದೇ ಮೊದಲ ಬಾರಿಗೆ...ನನ್ನ ಕಸಿನ್ ಗೋಪಿ ಜೋಶ್ ಬೆಚ್ಚಿಬೀಳಿಸುವಂತಿತ್ತು.

ಟೆಂಟ್ ಸಿಗೋದಿಲ್ಲ, ಜನ ಸಿಗೋಲ್ಲ ಕೊಯ್ಲು ಟೈಂ ಬೇರೆ ನಿಮ್ಗೊತ್ಲಾ ಎಂದು ಮೂಡಿಗೆರೆ ವಿಸ್ಮಯ ಪ್ರತಿಷ್ಠಾನದ ಬಾಪು ದಿನೇಶ್ ಎರಡು ಮೂರು ಸಾರಿ ಅದೇ ಉತ್ತರ ಕೊಟ್ಟಿದರು. ಗೋಪಿ ಕೂಡಾ ಅವರಿಗೆ ಪದೇ ಪದೆ ಕಾಲ್ ಮಾಡಿದ್ದ. ಜೊತೆಗೆ ಒಂಭತ್ತುಗುಡ್ಡಕ್ಕೆ ಹೋಗ್ಬೇಕಾ ಎಂದು ಅವರು ಕೇಳಿದ್ದು.

ಎಲ್ಲರಿಗೂ ಅನುಮಾನಕ್ಕೆ ಶುರುವಾಗಿತ್ತು, ಮಲ್ನಾಡ್ ಯಾಕೋ ನಮ್ಮನ್ನು ಬೇರೆ ಕಡೆ ಕರೆದುಕೊಂಡು ಹೋಗೋ ಪ್ಲ್ಯಾನ್ ಮಾಡಿದ್ದಾನೆ ಎಂದು ಕೆಲವರ ಮನಸ್ಸಿನಲ್ಲಂತೂ ಸಹಜವಾಗಿ ಪ್ರಶ್ನೆ ಎದ್ದಿತ್ತು. ನಂಗೂ ಕೂಡಾ ಒಂಭತ್ತು ಗುಡ್ಡ ಬ್ಲಾಗ್ ಗಳಲ್ಲಿ ನೋಡಿದಾಗ ಅಷ್ಟಾಗಿ ಚೆಂದ ಕಂಡಿರಲಿಲ್ಲ. ಆದ್ರೆ ಮನದ ಮೂಲೆಯಲ್ಲೊಂದು ಬಗೆ ಹೊಸ ರೋಚಕ ಅನುಭವದ ನಿರೀಕ್ಷೆಯಂತೂ ಇತ್ತು.

ಚಾರಣಕ್ಕೆ ಎರಡು ದಿನ ಮುಂಚೆ G.Prakash ಎಂಬ ಹೆಸರಿನಿಂದ ಒಂದು ಇಮೇಲ್ ಬಂದಿತ್ತು. ಟ್ರೆಕ್ಕಿಂಗ್ ಗೆ ಯಾರ್‍ಯಾರು ಬರ್ತಾರೆ ಎಂದು ಕುತೂಹಲ ತಳೆದಿದ್ದ ನನಗೆ G.Praksh ಎಂದರೆ ನಮ್ಮ ಗ್ಯಾಂಗ್ ಸೇರೋ ಹೊಸ ಸದಸ್ಯ ಇರ್ಬೇಕು ಎಂದು ತಿಳಿದಿದ್ದೆ. ಆಫೀಸ್ ನಲ್ಲಿ ಬೇರೆ ಹೊಸ ವರ್ಷದ ಸಂಭ್ರಮಕ್ಕೆ ಅದು ಇದು ಕಾರ್ಯಕ್ರಮ ಇತ್ತು. ರಜೆ ಮೇಲೆ ಹೋಗಲು ಅನುಮತಿ ಬೇರೆ ಸಿಕ್ಕಿರಲಿಲ್ಲ. ಮನಸ್ಸು ಮೂಡಿಗೆರೆಯಲ್ಲಿದ್ದರೆ ಆಫೀಸ್‌ನಲ್ಲಿ ಮೂಡ್ ಎಲ್ಲಿರುತ್ತೆ :)

ಕೊನೆಗೂ G.Prakash ಅಂದ್ರೆ ನನ್ನ ಕಸಿನ್ ಗೋಪಿಕೃಷ್ಣ ಪ್ರಕಾಶ್ ಎಂದು ತಿಳಿದಿದ್ದು ಚಾರಣಕ್ಕೆ ಹೊರಟ ದಿನದಂದೇ ಅಲ್ಲಿ ತನಕ ಅದು ಯಾರೋ ಹೊಸ ವ್ಯಕ್ತಿ ಎಂದು ಮೇಲ್ ಸರಿಯಾಗಿ ಓದಿರಲಿಲ್ಲ. ಗೋಪಿ ಒತ್ತಾಯಕ್ಕೆ ಮಣಿದು ಗೈಡ್, ವೆಹಿಕಲ್(ಮೂಡಿಗೆರೆಯಿಂದ 25 ಕಿ.ಮೀದ ಬೆಟ್ಟದ ಭೈರಾಪುರಕ್ಕೆ) ಅರೆಂಜ್ ಮಾಡಿದ್ದಾಯಿತು.

ಇನ್ನು ಬಸ್ ಬುಕ್ಕಿಂಗ್ ಸರದಿ..ಮೂಡಿಗೆರೆ ಎಂದೂ ಬಸ್ ಬುಕ್ ಮಾಡಿ ಹೋದ ನೆನಪಿಲ್ಲ. ಕಾರಣ ಸಿಗುತ್ತಿದ್ದದ್ದು ಬರೀ ಕೆಂಪು ಡಬ್ಬಗಳಾದ್ದರಿಂದ ತಡರಾತ್ರಿ ಸಿಗುವ ಬಸ್ ಯಾವುದಾದರೂ ಸಿಗುವ ಭರವಸೆ ನನಗಿರುತ್ತಿತ್ತು. ಆದರೆ, ನಮ್ಮ ತಂಡದ ಸಂಖ್ಯೆ ನೋಡಿ. ಒತ್ತಾಯಕ್ಕೆ ಮಣಿದು ಮುಂಗಡವಾಗಿ ಟಿಕೇಟ್ ಕಾಯ್ದಿರಿಸಲೇ ಬೇಕಾಯಿತು.
ಆನ್‌ಲೈನ್‌ನಲ್ಲಿ ಮಧ್ಯಭಾಗದಲ್ಲಿದ್ದಂತೆ ಕಂಡಸೀಟುಗಳು ಯಾಕೋ ಬಸ್ ಹತ್ತಿದಾಗ ಸೀಟುಗಳು ತೀರಾ ಬಾಗಿಲ ಬಳಿಗೆ ಬಂದಿದೆ ಅನ್ನಿಸಿತು.

ಮೆಜೆಸ್ಟಿಕ್‌ಗೆ ಹೊರಟುವ ಮುನ್ನ OG ಟ್ರೆಕ್ ರೂಟ್ ಟ್ರ್ಯಾಕ್ ಮಾಡುತ್ತಾ ಅಕ್ಷಾಂಶ, ರೇಖಾಂಶ ಎಂದು ಮೊಬೈಲ್ ಜಿಪಿಎಸ್‌ನಲ್ಲಿ ಆಟವಾಡಿದ್ದಷ್ಟೇ ಬಂತು. ಏನು ಸರಿಯಾಗಿ ತಿಳಿಯಲಿಲ್ಲ. ಸರಿಯಾಗಿ ಮೆಜೆಸ್ಟಿಕ್ ತಲುಪಿ ಪರಿಚಿತರ ಮುಖಗಳ ಜೊತೆಗೆ ಹೊಸದಾದ ಮೂವರನ್ನು ನೋಡಿದೆ ಆದರೆ, ಹೆಚ್ಚು ಮಾತಿಗಿಳಿಯಲಿಲ್ಲ. ಇನ್ನೂ ಒಬ್ಬ ಬರ್ತಾ ಇದೆ ಎಂದು ಗೋಪಿ ಹೇಳಿದ.

ಸದ್ಯ ನಮಗಿಂತ ಲೇಟ್ ಇನ್ನೊಬ್ಬ ಬರ್ತಾ ಇದಾನೆ ಎಂದು ಖುಷಿಯಾಯ್ತು. ಹಾಗೆ ಬಂದವನ ಹೆಸರು ಯಾಕೋ ನಂಗ್ಎ ಟ್ರೆಕ್ ಮುಗಿಯೋ ತನಕ ಗೊಂದಲವಾಗಿ ತಲೆಯಲ್ಲಿತ್ತು. ಅಶ್ವಲ್ ಎಂಬ ಹೆಸರು ನಂಗೆ ಅಶ್ಫಲ್ ಎಂದು ಕೇಳಿಸಿತ್ತು.

ಮುಂದೆ.. ಬಸ್ ಪುರಾಣ, ಡ್ರೈವರ್ ಜೂಲಿಯನ್ ಫರ್ನಾಂಡೀಸ್, ಗೈಡ್ ಗೊಂದಲ

ಗ್ರೀನ್ ರೂಟ್ ಪಯಣದಲ್ಲಿ ಚಿತ್ರಾನ್ನ ತಿಂದದ್ದು..




'ಕಡಗರಹಳ್ಳಿ' ಸ್ಟೇಷನ್. ಇದು ಕೂಡ ನಿರ್ಮಾಣ ಹಂತದಲ್ಲಿದೆ. ಅಲ್ಲಿದ್ದ ಕೆಲಸಗಾರರಿಂದ ಸೂಕ್ತ ಮಾಹಿತಿ ಪಡೆದೆವು. ಬೆಳಗಿನ ಉಪಹಾರ ಇಲ್ಲೇ ಮುಗಿಸುವುದೆಂದು ತೀರ್ಮಾನಿಸಿ. ಅಡುಗೆ ಮಾಡಲು ಅನುಮತಿ ಪಡೆದೆವು.

ಬಾಣಸಿಗರ ಬವಣೆ...9.30 ಕ್ಕೆ ಶುರು

ಒಣಗಿದ ಸೌದೆ ತರಲು ನಾನು ಅಮೇಲೆ ವೀರಿ ಇಬ್ಬರು ಸೇರಿ ಹೋದೆವು. ಒಂದಿಷ್ಟು ಕಲೆ ಹಾಕಿದೆವು. ಆದರೆ ಅದರಲ್ಲಿ ಎಷ್ಟೊಂದು ತುಂಡುಗಳು ಮಳೆಯಲ್ಲಿ ನೆಂದಿದ್ದರಿಂದ. ಒಲೆ ಉರಿಸಲು ಸ್ವಲ್ಪ ತ್ರಾಸಾಯಿತು. ಸೋಮ, ವರ್ಲಿನ್ ಒಲೆಗೆ ಕಿಚ್ಚು ಹಚ್ಚುವ ಕಾರ್ಯದಲ್ಲಿ ಮಗ್ನರಾಗಿದ್ದರು. ಶಿವನ ಕೈ ಸಿಗ್ಗಿದ್ದು, ಮಂಗನ ಕೈಗೆ ಮಾಣಿಕ್ಯ ಸಿಕ್ಕಂತಾಗಿತ್ತು. ಸಿಕ್ಕಿದ ಜಾಗವನ್ನೆಲ್ಲ ಸೆರೆ ಹಿಡಿಯತೊಡಗಿದ್ದ.

ಇತ್ತ ವೀರಿಗೆ ಸಹನೆ ಮೀರಿತ್ತು. ಹಸಿದ ಅವನ ಮನ ನಾವು ಹೇಳಿದ ಎಲ್ಲಾ ಕೆಲಸ ಮಾಡಲು ತಯಾರಾಗಿತ್ತು. ಪಾತ್ರೆ ತೊಳೆದು, ಅಕ್ಕಿ ತೊಳೆದು, ನೀರು ತಂದು ಕೊಟ್ಟ. ಅಲ್ಲಿಗೆ ನಿಲ್ಲಲಿಲ್ಲ. ನಂತರ ಅಲ್ಲಿನ ಕಾರ್ಮಿಕರಿಂದ ಎರಡು ತಟ್ಟೆ ಕೂಡ ಸಂಪಾದಿಸಿದ. ಆದ್ರೆ ಒಲೆ ಇನ್ನೂ ಹತ್ತಿರಲಿಲ್ಲ ಸರಿಯಾಗಿ. ಏನಾದರೂ ಹತ್ತದೆ ಆಟ ಆಡಿಸುತ್ತಿತ್ತು ಬೆಂಕಿ. ಕಡೆಗೂ ನಮ್ಮ ಗೋಳು ನೋಡಕ್ಕೆ ಆಗದೆ ಬೆಂಕಿ ಉರಿಯ ತೊಡಗಿತು. ಅಂತೂ ಅನ್ನ ರೆಡಿ ಮಾಡಿ . ನೀರು ಬಸಿದು ಹರಿವಿದ್ದು ಆಯಿತು. ಈ ಗಲಾಟೆಯೆಲ್ಲ ಶಿವ ಕೆಮರಾದಲ್ಲಿ ವಿಡಿಯೋ ಮಾಡುತ್ತಿದ್ದ.

ಅವನ ಯೋಚನಾ ಲಹರಿಗೆ ಒಂದು ಸ್ಯಾಂಪಲ್ ಅಂದ್ರೆ. 'ಅಬ್ಬಾ ನಾನು ಇಲ್ಲಿಂದ ಹೋದ ಮೇಲೆ ಮೊದಲು ಪ್ರೆಟಿ ಬಾಯ್ ಮತ್ತೆ ತೆರೆ ಬಿನಾ ಸಾಂಗ್ ಕೇಳಬೇಕು ಅಂತಿದ್ದ'. ನಗರ ಜೀವನದ ಸವಿವುಂಡವನಿಗೆ ಪಕೃತಿ ಮಡಿಲಿನಿಂದ ಹೊರಬೀಳುವ ಮನಸ್ಸು ಹೇಗೆ ಬಂತೋ ನಾ ಕಾಣೆ.. ಪುಣ್ಯಾತ್ಮ. ಊಟಕ್ಕೆ ಕುಳಿತುಕೊಳ್ಳ ಬೇಕಾದ ಸ್ಥಳವನ್ನು ವೀರಿನೇ ಕ್ಲೀನ್ ಮಾಡಿದ ಅಂತಾ ಪ್ರತ್ಯೇಕವಾಗಿ ಹೇಳಬೇಕಿಲ್ಲ ಅನ್ಸುತ್ತೆ. ಬಿಟ್ಟಿದ್ರೆ ನಮ್ಮ ಪಾಲಿಂದೂ ಖಾಲಿ ಮಾಡುತ್ತಿದ್ದ.

ನಮಗೆ ಅರೆಬೆಟ್ಟ ಸ್ಟೇಷನ್‌ನಲ್ಲಿ ಸಿಕ್ಕಿದ ಮಾರ್ಗದರ್ಶಿಯ ಇಲ್ಲೂ ಆಯಿತು. ಪುಣ್ಯಾತ್ಮ ಬೆಳಗ್ಗೆ 8:45 ಗೆ ಅಲ್ಲಿಂದ ಹೊರಟವನು ಇಲ್ಲಿಗೆ 11: 15 ಗೆ ತಲುಪಿದ್ದ. ಸುಮಾರು 6 ರಿಂದ 7 ಕಿಮೀ ಸರಾಸರಿಯಲ್ಲಿ ಬಂದಿದ್ದ ಅಂದ್ರೆ ನಿಜಕ್ಕೂ ಗ್ರೇಟ್. ಮುಂದಿನ ಹಾದಿಯ ವಿವರವನ್ನು ಆತನಿಂದ ಪಡೆದು. ನಮ್ಮ ಪಾತ್ರೆ ಪಗಡುಗಳನ್ನು ತೊಳೆದು ಬಳೆದು ಹೊರಟಾಗ ಗಂಟೆ 11: 45. ಸ್ವಲ್ಪ ಹೆಚ್ಚು ಹೊತ್ತೇ ಇಲ್ಲಿ ನಿಂತ್ತಿದ್ದೆವು ಅನಿಸಿತು.

Sunday 25 December 2011

A snap taken from Malaya Marutha guest house- ಮಲಯ ಮಾರುತದಿಂದ ಕಂಡ ದೃಶ್ಯ


At Malaya Marutha Guest House, Charmadi Ghat, Kottigehara- ಮಲಯ ಮಾರುತ ಅತಿಥಿ ಗೃಹದ ಎದುರಿನ ಗುಡ್ಡ ಬೆಳ್ಳಂಬೆಳ್ಳಗ್ಗೆ ಕಂಡಿದ್ದು ಹೀಗೆ...

Saturday 24 December 2011

ಗ್ರೀನ್ ರೂಟ್ (ನಿಸರ್ಗದ ಹಾದಿ)ಗೆ ಪಯಣ-Escape to Green Route



ದಿನಾಂಕ : 01 ಅಕ್ಟೋಬರ್ 2006
ಬಿಟ್ಟ ಸ್ಥಳ : ಬೆಂಗಳೂರು ಮಹಾನಗರ
ತಲುಪಬೇಕಾದ್ದು : ಗ್ರೀನ್ ರೂಟ್ green route
ಟೀಮ್: ಸೋಮ ಶೇಖರ, ವರ್ಲಿನ್ ಲೊಬೋ, ವೀರೇಶ ಹೊಗೆಸೊಪ್ಪಿನವರ್, ಶಿವ ಕೇಶವ, ಮಹೇಶ್ ಮಲ್ನಾಡ್

ಪ್ರೀ ಪ್ಲಾನ್: ಪೀಠಿಕೆ

ಎಲ್ಲಿಗೆ ಹೋಗೋದು ಅಂತಾ ಯಾರಿಗೂ ತಿಳಿದೇ ಇರಲಿಲ್ಲ. ರಜಾ ಇದೆ ಒಟ್ಟಿನಲ್ಲಿ ಒಂದು ಕಡೆ ಹೋಗಿ ಬರೋಣ ಅನ್ನೋದು ಎಲ್ಲರ ಮನಸ್ಸಿನ ಮಾತಾಗಿತ್ತು.

`ಎಲ್ಲಿಗಾದ್ರೂ ಸರಿ ಆದ್ರೆ ಸ್ಕೂಲ್ ಟ್ರಿಪ್ ತರ ಆಗಬಾರ್ದು ಕಣ್ರೋ' ಅಂತಾ ಸೋಮ ಹೇಳ್ತಾನೆ ಇದ್ದ.

ಶನಿವಾರ, 30 ಸೆಪ್ಟೆಂಬರ್ 2006.

ಅಫೀಸಿನಲ್ಲಿ ಕೆಲಸ ಮುಗಿತ್ತಿದ್ದಂತೆ ಶುರುವಾಯಿತು ನಿಜವಾದ ಚರ್ಚೆ 'ಎಲ್ಲಿಗೆ ನಮ್ಮ ಪಯಣ, ಯಾವುದು ದಾರಿ' ...
ಪಕ್ಕದ ಕೋಣೆಯಿಂದ ಶಿವ ಬಂದೂ ಬಂದೂ ಪೀಡಿಸತೊಡಗಿದ ಎಲ್ಲಿಗೆ ಹೋಗುತ್ತಿರೊದು ಹೇಳೂ ಅಂತಾ..., ವೀರಿ ಅಂತೂ ಎಲ್ಲಿಗಾದ್ರೂ ನಾನು ರೆಡಿ ಅಂತಾ ಕುಂತಿದ್ದ.

ಈಗ ಡಿಸೈಡ್ ಮಾಡ್ಲೇಬೇಕಿತ್ತು ನಮ್ಮ ಗುರಿನಾ, ಮನೇಲಿ ಸುಖ ನಿದ್ದೆಯಲ್ಲಿದ್ದ ಸೋಮನ ಎಬ್ಬಿಸಿ, ಮೆಸ್ಸೆಂಜರ್ ಬಾ ಅಂತಾ ಹೇಳಿದೆ.

ಮೊದಲು ಮಂಗಳೂರು, ಸೀತಾ ನದಿ ರೆಸಾರ್ಟ್ ಅಂತಾ ಶುರುವಾದ ಚರ್ಚೆ ಕೊನೆಗೆ 'ಬಸರಿ ಕಟ್ಟೆ' ಬಳಿ ಬಂದು ನಿಂತಿತ್ತು. ಆದರೆ 'ಬಸರಿ ಕಟ್ಟೆ' ಮೇಗ್ತಿ ಗುಡ್ದದ ಬಗ್ಗೆ ನಮಗೆ ಹೆಚ್ಚು ಮಾಹಿತಿ ಇರಲಿಲ್ಲ. ಮಾಹಿತಿ ನೀಡೊ ನಮ್ಮ ಸ್ನೇಹಿತ, 'ಬನ್ನಿ ಚೆನ್ನಾಗಿದೆ..' ಎಂದಷ್ಟೇ ಹೇಳಿ ಊರಿನ ಹಾದಿ ಹಿಡಿದಿದ್ದ.

ಅಷ್ಟರಲ್ಲಿ ಮಂಗಳೂರು ಸ್ನೇಹಿತರೊಬ್ಬರು ಕರೆ ಮಾಡಿ 2 ನೇ ತಾರೀಖಿನ ನಂತರ ನಾನು ನಿಮಗೆ ಸಿಗುತ್ತೇನೆ ಅಂತಾ ಅಂದ್ರು. ಗೊಂದಲದ ಗೂಡಾಗಿದ್ದ ನಮ್ಮ ತಲೆ ಕಡೆಗೆ ಶಿರಿಸಿ, ಯಲ್ಲಾಪುರದ ಕಡೆಗೂ ಪಯಣ ಬೆಳೆಸಿ ಬಂದಿತ್ತು.

ಇನ್ನು ಒಂದು ದಿನ ಮಾತ್ರ ಇತ್ತೂ ಡಿಸೈಡ್ ಮಾಡೊಕ್ಕೆ ಬಸರಿ ಕಟ್ಟೆನಾ ಅಥವಾ ಗ್ರೀನ್ ರೂಟ್ ಕಡೆಗೆ ಹೋಗೊsದ ಅಂತಾ..

ಭಾನುವಾರ, 1 ಅಕ್ಟೋಬರ್ 2006


ದಿನನಿತ್ಯದ ಚುಟುವಟಿಕೆಗೆ ರೆಸ್ಟ್ ಕೊಟ್ಟು, ಸ್ವಲ್ಪ ಆರಾಮವಾಗಿ ದಿನ ಪ್ರಾರಂಭಿಸಿದ ನನಗೆ ಹಿಂದಿನ ದಿನದ ಸಮಸ್ಯೆ ಇನ್ನೂ ಕಾಡ್ತಾ ಇತ್ತು. ಅದಕ್ಕೆ ಪೂರಕವಾಗಿ ಅಥವಾ ಮಾರಕವಾಗಿ ವೀರೀದೂ ಎಸ್ಸೆಮ್ಮೆಸ್ ಮೇಸಜ್‌ಗಳ ಕಾಟ, ಎಲ್ಲದ್ರಲ್ಲೂ ಒಂದೇ ರಾಗ `ಎಲ್ಲಿಗೆ ನಮ್ಮ ಪಯಣ, ಯಾವುದು ದಾರಿ' ...

ನಾನು ಎರಡು ಮೂರು ಬಾರಿ ನನ್ನ ಕಸಿನ್‌ಗೆ ಕಾಲ್ ಮಾಡಿ ವಿಚಾರಿಸಿದೆ ಹೇಗಿದೆ ಬಸರಿ ಕಟ್ಟೆ ಬಳಿ ಗುಡ್ಡ. ಅಲ್ಲಿಗೆ ಹೋದ್ರೆ ಚೆನ್ನಾನಾ ಅಥವಾ ಇಲ್ಲಿಗೆ ಹೋದ್ರೆ ಚೆನ್ನಾನ ಅಂತಾ, ಅವರಿಂದ ಬಂದ ಉತ್ತರ ಅಷ್ಟೊಂದು ಪ್ರೇರಕವಾಗಿರಲಿಲ್ಲ.

ಸೋಮನಿಗೆ 11 ಗಂಟೆ ಅಂತಾ ಡೈಡ್ ಲೈನ್ ಕೊಟ್ಟೆ. ಅಷ್ಟರಲ್ಲಿ ಶಿವನ ಸಹನೆ ಕಟ್ಟೆ ಹೊಡೆದು 'ನಾನು ಬರೋಲ್ಲ ಹೋಗ್ರೋ ಸುಮ್ನೆ ನಂಗೆ ಸತಾಯಿಸೋಕೆ ನೀವು ನಾಟಕ ಮಾಡ್ತ ಇದ್ದಿರ ಅಂತಾ ಹೇಳಿದ್ದು ಆಯ್ತು'.

ಅಪರಾಹ್ನ 12.30 : ಕಡೆಗೂ ಡಿಸೈಡ್ ಆಯ್ತೂ ನಮ್ಮ ಡೆಸ್ಟಿನೇಷನ್ 'ಅಪರೇಷನ್ ಗ್ರೀನ್ ರೂಟ್'. ನಮ್ಮ ಜೊತೆಗೆ ಸೋಮನ ಸ್ನೇಹಿತನೊಬ್ಬನೂ ಬರುವುದಾಗಿ ತಿಳಿದು ಸಂತೋಷವಾಯಿತು.

ರಜೆಗಳು ಸಾಲು ಸಾಲಾಗಿ ಇದ್ದಿದ್ದರಿಂದ ಕೆಎಸ್‌ಆರ್‌ಟಿಸಿ ಬಸ್ ನೆಚ್ಚಿಕೊಳ್ಳೊ ಆಗಿರಲಿಲ್ಲ. ಆದ್ರೂ ಒಂದೆರಡು ಬುಕ್ಕಿಂಗ್ ಸೆಂಟರ್‌ಗೆ ಹೋಗಿ ವಿಚಾರಿಸಿದ್ದು ಆಯ್ತು ಪ್ರಯೋಜನವಾಗಲಿಲ್ಲ. ಪ್ರೈವೇಟ್ ಗಾಡಿ ಟ್ರೈ ಮಾಡು ಅಂದಾ ಸೋಮ, ಗಂಟೆ ಆಗಲೇ 2.30 ದಾಟಿತ್ತು.

ಜಯನಗರದಿಂದ ಮೆಜೆಸ್ಟಿಕ್‌ಗೆ ಬಂದು ಪ್ರೈವೇಟ್ ಟೂರ್ಸ್ ಅಂಡ್ ಟ್ರಾವೆಲ್ಸ್ ಹುಡುಕಿಕೊಂಡು ಹೊರಟೆ. 'ಸುಗಮ ಟ್ರಾವೆಲ್ಸ್' ಅಂತಾ ಬೋರ್ಡ್ ಕಣ್ಣಿಗೆ ಬಿತ್ತು. ಇದು ಊರು ಕಡೆ ಕಂಡ ಸುಗುಮ ಟ್ರಾವೆಲ್ಸ್ ಇರ್ಬೇಕು ಎಂದು ಎನಿಸಿದ್ದೆ. ಆದರೆ, ಕತೆ ಬೇರೆಯದ್ದೆ ಆಗಿತ್ತು. ನಮ್ಮ ಪಯಣನೂ ಸುಗಮವಾಗಿರೋತ್ತೆ ಅಂತಾ ಅಂದುಕೊಂಡ್ವಿ. ಮಾಮೂಲಿ ಚಾರ್ಚ್‌ಕ್ಕಿಂತ 25 ರೂಪಾಯಿ ಪ್ರತಿ ಸೀಟಿಗೂ ಕಿತ್ತುಕೊಂಡ. ಸ್ಪೇಷಲ್ ಗಾಡಿ ಹೈಟೆಕ್ ಸರ್ವಿಸ್ ಅಂತಾ ಹೇಳಿ.

ಸಂಜೆ 4.00: ಇನ್ನು ಪ್ರೀಪರೇಷನ್ ಶುರುವಾಯ್ತು. ಹಾಕಿದ ಬಟ್ಟೆ ಜೊತೆಗೆ ಒಂದು ಸೆಟ್. ಬೆಡ್ ಶೀಟ್, ಜಮಖಾನ ಹೀಗೆ ಎಲ್ಲಾ ಸೇರಿ ಒಂದು 4 ಕೆಜಿ ತೂಗೊ ಸಣ್ಣ ಮೂಟೆ ಆಯ್ತು ನನ್ನ ಬ್ಯಾಗ್.


ಅಂತೂ ಬಿಟ್ವಿ ಬೆಂಗಳೂರನ್ನ: ರಾತ್ರಿ 10.30ಕ್ಕೆ ಹೊರಡಬೇಕಿದ್ದ ನಮ್ಮ ಗಾಡಿ ಹೊರಡಿದ್ದು 11.30ಕ್ಕೆ. ಕಪಾಲಿ ಹತ್ರ ಇದೆ ಬಸ್ ಅಂತಾ ಒಬ್ಬ. ಇಲ್ಲಾ ಆಫೀಸ ಹತ್ರಾ ಇದೆ ಅಂತಾ ಇನ್ನೊಬ್ಬ ನಮಗೆ ಗೈಡ್ ಮಾಡಿದ್ದೇ ಮಾಡಿದ್ದು. ಕಡೆಗೂ ಸಿಕ್ತು ಬಸ್.

ಹಳದಿ ಬಣ್ಣದಲ್ಲಿ ಥಳ ಥಳ ಹೊಳೆಯುತ್ತಿದ್ದ ಬಸ್ ಹೊರಗಡೆ ಸುಂದರವಾಗಿ ಕಾಣಿಸ್ತಾ ಇತ್ತು. ಹತ್ತೋಕ್ಕೆ ಮುಂಚೆ ಯಾವುದಕ್ಕೂ ವಿಚಾರಿಸೋಣ ಅಂತಾ ಸ್ಟೇರಿಂಗ್ ಹಿಡಿದುಕೊಂಡು ತಪಸ್ಸು ಮಾಡ್ತ ಕುಂತಿದ್ದ ಡ್ರೈವರ್‌ನ ಕುಕ್ಕೆಗೆ ಹೋಗೊತ್ತಾ ಅಂತಾ ಕೇಳಿದ್ರೆ 'ಇಲ್ಲಾ ಇದು ಧರ್ಮಸ್ಥಳಕ್ಕೆ ಮಾತ್ರ ಹೋಗೋದು' ಅನ್ನೋದಾ. ಛೆ ಎಂತಾ ಕೆಲಸ ಆಯ್ತು. ಅನ್ನಿಸ್ತು. ಆದ್ರೆ ಬೇರೆ ವಿಧಿ ಇರಲಿಲ್ಲ. ಬಣ್ಣ ಬಣ್ಣದ ಲೈಟ್‌ನಿಂದ ತುಂಬಿತ್ತು ಬಸ್‌ನ ಒಳಾಂಗಣ.

ಶುರುವಾಯ್ತು ಕಿರಿಕ್‌ಗಳು...
'ಹಲೋ ಸೀಟ್ ಸ್ವಲ್ಪ ಮುಂದಕ್ಕೆ ಮಾಡಿಕೊಳ್ಳಿ. ನಂಗೆ ಕಾಲು ಚಾಚೋಕೆ ಆಗ್ತಾಯಿಲ್ಲ' ಅಂತಾ ಹಿಂದಿನ ಸೀಟ್‌ನ ಯುವಕ ರಾಗ ಎಳೆದಿದ್ದು ಎಷ್ಟೋ ಹೊತ್ತು ತನ್ನ ಮಾರ್ದನಿಯನ್ನು ಹೊರಡಿಸುತ್ತಲೇ ಇತ್ತು. ಮೊದಲಿಗೆ ನಾವು ಕೂತಿದ್ದ ಸೀಟ್‌ನ ಹಿಂದೆ ಮುಂದೆ ಮಾಡೊದಕ್ಕೆ ಬೇಕಾದ ಲಿವರ್‌ನ ಹುಡುಕಿ ಹುಡುಕಿ ಸಾಕಾಗಿತ್ತು.

ಸರಿ...ನಿದ್ದೆ ಮಾಡೋಣ ಅಂತಾ ಸೀಟು ಹಿಂದೆ ಮಾಡಿದರೆ ಹಿಂದಿನ ಸೀಟಿನ ಯುವಕರ ಸಿಟ್ಟಿಗೆ ಗುರಿಯಾಗಬೇಕಾಗಿತ್ತು. ನಮ್ಮಲ್ಲಿ ಯಾರಿಗೂ ಜಗಳ ಆಡೋ ಮೂಡ್ ಇರಲಿಲ್ಲವಾದ್ದರಿಂದ ಸೀಟ್ ಪುರಾಣ ಅಲ್ಲಿಗೆ ನಿಂತೊಯ್ತು.

ಬಣ್ಣದ ಟಿವಿಯಲ್ಲಿ ಚೆಂದದ ಚಿತ್ರ ನೋಡುತ್ತಾ ಹೋಗಬಹುದೆಂಬ ಆಸೆಯಿತ್ತು ನಮ್ಮ ಹುಡುಗರಿಗೆ. ಆದ್ರೆ ಬಸ್‌ನವರು ಹಾಕಿದ್ದು ಹಳೆ 'ತೆಲುಗು ಪೌರಾಣಿಕ ಚಿತ್ರ'. ಫಿಲಂ ಚೆನ್ನಾಗಿದಿದ್ದರೆ ಹೋಗ್ಲಿ ಅಂತಾ ಸುಮ್ಮನಿರುತ್ತಿದ್ದೇವೋ ಏನೋ. ಆದ್ರೆ ನಿಂತು ನಿಂತು ಸಾಗುತ್ತಿದ್ದ ಚಿತ್ರದ ಓಟವನ್ನು ನೋಡಲಾಗದ ನಮಗೆ ಕನ್ನಡ ಪ್ರೇಮ ಜಾಗೃತವಾಗಿ ಡ್ರೈವರ್ ಕ್ಯಾಬೀನ್‌ಗೆ ಹೋಗಿ ದಬಾಯಿಸಿ ಫಿಲಂ ಬಂದ್ ಮಾಡಿಸಿದ್ದಷ್ಟೇ ಬಂತು ಪುಣ್ಯ ತಿರುಗಿ ಬೇರೆ ಫಿಲಂ ಹಾಕುವ ಅವನ ಆಶ್ವಾಸನೆ ನಮ್ಮ ನಿದ್ದೆಯೊಂದಿಗೆ ಮರೆಯಾಯಿತು.

ಇನ್ನೂ ಬೆಂಗಳೂರು ದಾಟಿರಲಿಲ್ಲ. ನಿದ್ದೆ ಇನ್ನೂ ಪೂರ್ಣವಾಗಿ ಆವರಿಸಿರಲಿಲ್ಲ ಅಷ್ಟರಲ್ಲಿ ಬಸ್ ಡೈವರ್ ವಾಯ್ಸ್ ಜೋರಾಗಿ ಕೇಳಿಸಿತು. ವಿಷಯ ಏನಂದರೆ ಪೆಟ್ರೋಲ್‌ಬಂಕ್‌ನಲ್ಲಿ ಇಂಧನ ತುಂಬೋ ಹುಡುಗ ಫ್ಯೂಲ್(fuel) ಜೋರಾಗಿ ಹಾಕ್ತಿದ್ದಾನೆ ಅಂತಾ ಡ್ರೈವರ್ ತಕರಾರು. 'ಏಯ್. ನಿಧಾನಕ್ಕೆ ಬಿಡು ನಂಬರ್ ಜಂಪ್ ಆಗ್ತಾಯಿದೆ' ಅಂತಾ ಡ್ರೈವರ್ ಕೂಗಾಡಿದ್ದೆ ಕೂಗಾಡಿದ್ದು.

ಬಸ್‌ನಲ್ಲಿ ಮಲಗಿದ್ದವರಿಗೆಲ್ಲಾ ಒಳ್ಳೆ ಸೈರನ್ ತರ ಕೇಳಿಸತೊಡಗಿತು ಡ್ರೈವರ್ ಧ್ವನಿ. ಬಂಕ್ ಹುಡುಗನಿಗೂ ಡ್ರೈವರ್ ವರ್ತನೆ ಅತಿಯೆನಿಸಿತು ಅನ್ಸುತ್ತೆ . ಇಂಧನ ತುಂಬುತ್ತಾ ಇದ್ದ ಪೈಪ್‌ನ ಬಿಸಾಟು ತುಂಬಿಕೊಳ್ಳಯ್ಯ ನೀನೇ ಬೇಕಾದರೆ ಅಂದುಬಿಟ್ಟ.

ಅಲ್ಲಿಂದ ಮುಂದೆ ಹೊರಟ ಬಸ್ ಸುಗಮವಾಗಿ ಸಾಗತೊಡಗಿತೆನಿಸುತ್ತದೆ. ಕಾರಣ ನಂಗೆ ಚೆನ್ನಾಗಿ ನಿದ್ದೆ ಬಂದಿತ್ತು. ಆದ್ರೆ ನಿದ್ದೆ ಮಾಡೊಕೆ ಬಿಟ್ಟರೆ ತಾನೇ ಬಸ್ ಹಾಗೂ ಅದರ ಸಿಬ್ಬಂದಿ....

ಕುಣಿಗಲ್ ಇನ್ನೂ ಮುಟ್ಟಿರಲಿಲ್ಲ ಆಗಲೇ ಗಾಡಿ ನಿಂತು ಬಿಡ್ತು ಇನ್ನೊಂದು ಸಾರಿ. ಈ ಬಾರಿ ಹೆಚ್ಚು ಹೊತ್ತೇ ನಿಂತಿತ್ತು. ನಂಗೆ ಎಚ್ಚರವಾಗಿದ್ದು ಸೋಮ ವೀರೇಶನಿಗೆ ಹೋಗಿ ಟಾರ್ಚ್ ಬೆಳಕು ತೋರಿಸು ಡ್ರೈವರ್‌ಗೆ ಅಂದಾಗ. ಕಣ್ಣು ಬಿಟ್ಟು ನೋಡಿದರೆ ತಿಳಿಯಿತು. ಗಾಡಿ ಪಂಕ್ಚರ್ ಅಂತಾ...

ಈ ಗಲಾಟೆಯಲ್ಲಿ ಹೋಟೆಲ್‌ನಿಂದ ಕಟ್ಟಿಸಿಕೊಂಡು ಬಂದಿದ್ದ ಪಲಾವ್ ಭಕ್ಷಣೆ ಕಾರ್ಯ ಕತ್ತಲಲ್ಲಿ ನಿರಂತರವಾಗಿ ಸಾಗಿತ್ತು. ಬೇರೆಯವರೆಲ್ಲಾ ಮೊದಲೇ ತಿಂದಿದ್ದರಿಂದ ಕಾಟ ಕೊಡುವವರಿಲ್ಲದೆ ನೆಮ್ಮದಿಯಿಂದ ಉರಿಗಾರದ ಪಲಾವ್ ಹೊಟ್ಟೆಗಿಳಿಸಿಕೊಂಡೆ. ಕೈ ತೊಳೆಯೊಕೆ ಅಂತಾ ಕೆಳಗಿಳಿದವನು, ಮೊಬೈಲ್‌ನ ಟಾರ್ಚ್ ಬೆಳಕು ಬಿಡೊಕೊ ಹೋದೆ ವ್ಹೀಲ್ ಬದಲಾಯಿಸಿದ್ದ ಕಡೆ.

ಇನ್ನೇನು ಹೆಚ್ಚಿನ ವಿಶೇಷವಿಲ್ಲದೆ ಸಾಗಿದ ನಮಗೆ ಬೆಳ್ಳಂಬೆಳಗೆ ಚಳ್ಳೆಹಣ್ಣು ತಿನ್ನಿಸಿಟ್ರು ಶ್ರೀಶ್ರೀಶ್ರೀ (ಸಾಕು ಅನ್ಸೋತ್ತೆ ಶ್ರೀಕಾರ) ಸತ್ಯನಾರಾಯಣ ಟ್ರಾವೆಲ್ಸ್‌ನವರು. `ಕುಕ್ಕೆಗೆ ಹೋಗೋರು ಇಳಿರಿ' ಅಂತಾ ಕೂಗು ಕೇಳಿಸಿತು. ಕಣ್ಣುಜ್ಜಿಕೊಂಡು ನೋಡಿದರೆ ಇನ್ನೂ 'ಗುಂಡ್ಯ'ದಲ್ಲೇ ಇದ್ವಿ.

ಏನು ವಿಚಾರಿಸೋಣ ಅಂತಾ ಸೋಮ ನಡೆದ ಜೊತೆಗೆ ಇರಲಿ ಅಂತಾ ಲಗ್ಗೇಜು ಜೊತೆಗೆ ಹೊರಟ್ವಿ ಬಸ್ ಮುಂಭಾಗಕ್ಕೆ. ನಾವು ಇಳಿಯೋ ಜಾಗ ಇದೇನೇ ಅಂತಾ ಡ್ರೈವರ್ ಮತ್ತೊಮ್ಮೆ ಸುಗ್ರೀವಾಜ್ಞೆ ಹೊರಡಿಸಿ ಬಿಟ್ಟ. ಬೇರೆ ವಿಧಿಯಿಲ್ಲದೆ ನಮ್ಮ ಕರ್ಮ ಅಂತಾ ತಿಳಿದು ಅಲ್ಲೇ ಇಳಿದೆವು.

ಕೋಪೋದ್ರಿಕ್ತರಾಗಿ ಕೆಳಗಿಳಿದ ನಮಗೆ ತುಂತುರು ಹನಿಗಳ ಹಿತವಾದ ಸ್ವಾಗತ ಕ್ಷಣಾರ್ಧದಲ್ಲಿ ತಂಪಾಗಿಸಿಬಿಟ್ಟಿತು. ಇಲ್ಲೇ ಕುಳಿತ್ತಿದ್ದ ಸ್ಥಳೀಯರೊಬ್ಬರಿಂದ ರೈಲ್ವೇ ಹಳಿಗಳಿಗೆ ಹೋಗೋ ವಿಳಾಸದ ಬಗ್ಗೆ ವಿಚಾರಿಸಿ ತಿಳಿದುಕೊಂಡೆವು. ಹೊಟ್ಟೆ ತುಂಬಿಸಿಕೊಳ್ಳೊದಿಕ್ಕೆ 40 ಇಡ್ಲಿ ತೊಗೊಂಡು ಬಸ್ ಬರೋ ಹಾದಿ ಕಾಯುತ್ತಾ ನಿಂತಿದ್ವಿ.

ಮೈನ್ ಜರ್ನಿ
ಸಮಯ ಬೆಳಗ್ಗೆ 7.30, ಸೋಮವಾರ, 2 ಅಕ್ಟೋಬರ್ 2006
ಕರೆಕ್ಟ್ ಟೈಮ್‌ಗೆ ಬಸ್ ಹಾಜರ್. ನಾವು ಇಳಿಯಬೇಕಾಗಿದ್ದ ಸ್ಥಳ 'ಕೆಂಜಳ'. ಕಂಡೆಕ್ಟರ್‌ನ ಒಮ್ಮೆ ನಾವು ಹಿಡಿಯಬೇಕಾಗಿದ್ದ ಹಾದಿಯ ಬಗ್ಗೆ ಕೇಳಿ ತಿಳಿಕೊಂಡೆವು. ಸುಮಾರು ಹತ್ತು ಹದಿನೈದು ನಿಮಿಷ ಕಳೆದ ನಂತರ `ಕೆಂಜಳ' ತಲುಪಿದೆವು. ಅಲ್ಲೇ ಇದ್ದ ತಂಗುದಾಣದಲ್ಲಿ ಟ್ರೆಕ್ಕಿಂಗ್‌ಗೆ ಬೇಕಾದ ರೀತಿಯಲ್ಲಿ ನಮ್ಮ ದಿರಿಸುಗಳನ್ನು ಸರಿಪಡಿಸಿಕೊಂಡು ಹೊರಟೆವು.

ಮುಂದೆ ಮುಂದೆ ಹೊದಂತೆಲ್ಲಾ ಮೂರು ಮೂರು ಕವಲು ದಾರಿಗಳು ಕಾಣಿಸತೊಡಗಿ ಗೊಂದಲ ಮೂಡಿಸತೊಡಗಿತು. ಆದರೆ ಕೆಂಜಳ ಬಸ್‌ನಿಲ್ದಾಣದಲ್ಲಿ ಸಿಕ್ಕ ಸ್ಥಳೀಯರು ಹೇಳಿದಂತೆ `ಇಲ್ಲಿಂದ ನೇರ ಹೋಗಿ ರೈಲ್ವೇ ಹಳಿ ಸಿಗೊತ್ತೆ' ಅನ್ನೋ ಮಾತಿನ ಪ್ರಕಾರ ಅಡ್ದದಾರಿ ಹಿಡಿಯದೇ ನೇರವಾಗಿ ನಡೆದೆವು. ನಮ್ಮ ಲಕ್ ಎಲ್ಲೋ ದಾರಿ ಮಿಸ್ ಮಾಡಿಕೊಳ್ಳಲಿಲ್ಲ. ರೈಲ್ವೇ ಹಳಿಗಳನ್ನು ಸುಮಾರು 8.30ಕ್ಕೆ ತಲುಪಿದೆವು.


ಇನ್ನೂ ಇಪ್ಪತ್ತು ನಿಮಿಷ ನಡೆದಿರಲಿಲ್ಲ ಅಷ್ಟರಲ್ಲಿ ಹೊಟ್ಟೆ ತಾಳ ಹಾಕೋಕೆ ಶುರುಮಾಡಿತು. ನೀರಿನ ಆಸರೆ ಸಿಕ್ಕ ಕಡೆ ನಿಂತು ನಿತ್ಯಕರ್ಮಗಳನ್ನು ಮುಗಿಸಿಕೊಂಡೆವು. ಅರ್ಧದಷ್ಟು ಇಡ್ಲಿ ತಿಂದು ಹೊರಡುವಷ್ಟರಲ್ಲಿ ಗಂಟೆ 9.30 ದಾಟುತ್ತಿತ್ತು.
ಇಲ್ಲಿ ಒಂದು ಸ್ವಾರಸ್ಯ ನಡೆಯಿತು. ಎಲ್ಲಾ ಹೊರಡಬೇಕು ಅನ್ನುವಷ್ಟರಲ್ಲಿ...

ಏನೋ ಒಂದು ರೀತಿ ವಿಚಿತ್ರ ಶಬ್ದ ಕೇಳಿಸತೊಡಗಿತು. ಏಲ್ಲಿಂದ ಬರುತ್ತಾ ಇದೇ ಅಂತಾ ಹುಡುಕಿದ್ದೇ ಹುಡುಕಿದ್ದು, ಅದರ ಸುಳಿವು ಸಿಗಲೇ ಇಲ್ಲ. ಕೆಲ ನಿಮಿಷಗಳ ನಂತರ ಮತ್ತೆ ಶುರು ಶಬ್ದ ತರಂಗ.. ಎಲ್ಲರ ಮೊಬೈಲ್ ಎಲ್ಲೆಲ್ಲಿದೆ ಅಂತಾ ನೋಡಿದೆವು. ಮೊಬೈಲ್ ಅಲ್ಲಾ ಮತ್ತೆ ಏನು. ಈಗ ಶಬ್ದದ ಮೂಲ ಎಲ್ಲಿಂದ ಅನ್ನೊದೇನೋ ತಿಳಿತು. ಸೋಮನ ಬ್ಯಾಗ್ ಪೂರ್ತಿ ತಡಕಿದ್ದಾಯ್ತು ಆದರೆ ಸಮಸ್ಯೆ ಬಗೆಹರಿಯಲಿಲ್ಲ. ಮತ್ತೆ ಮತ್ತೆ ಸೌಂಡ್ ವೈಬ್ರೈಟ್ ಆಗ್ತಾನೇ ಇತ್ತು.

ಆಷ್ಟರಲ್ಲಿ ವೀರೇಶನಿಗೆ ಹೊಳೆದೆ ಬಿಡ್ತು ಶಬ್ದದ ಮೂಲ. ಸೋಮನ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ ಇಟ್ಟಿದ್ದ. ಆದ್ರೆ ಅಲಾರಂ ಇಟ್ಟಿದ್ದರಿಂದ ಹತ್ತತ್ತು ನಿಮಿಷಕ್ಕೊಮ್ಮೆ ಅಲಾರಾಂ ಹೊಡೆಯುತ್ತಾ ಇತ್ತು. ಅದೂ ವೈಬ್ರೈಷನ್ ಜೊತೆಗೆ ಎಲ್ಲ ಸೇರಿ ಸ್ವಲ್ಪ ಕಾಲ ಗೊಂದಲ ಮೂಡಿಸಿತ್ತು.

ಅಲ್ಲಿಂದ ಹೊರಟ ನಮ್ಮ ಪಯಣ ನಿಧಾನವಾಗಿ ಸಾಗಿತೆನ್ನಬೇಕು. ಹೆಚ್ಚಿಗೆ ವಿಶೇಷವಿಲ್ಲದೆ ಮುಂದಿನ ಗುರಿಯನ್ನು ತಲುಪಿದೆವು. ಮುಂದೆ ನಮಗೆ ಸಿಗಿದ್ದು`ಸಿರಿಬಾಗಿಲು' ಎಂಬ ನಿರ್ಗತಿಕ ನಿಲ್ದಾಣ. ಸಿರಿ ಬಾಗಿಲನ್ನು ತಲುಪಿದಾಗ ಸುಮಾರು 12 ಗಂಟೆ 15 ನಿಮಿಷದ ವಿಶ್ರಾಂತಿ ತೆಗೆದುಕೊಂಡು ಮತ್ತೆ ಪಯಣ ಶುರು ಮಾಡಿದೆವು..

ಹಾದಿ ಕಠಿಣ...ಆದ್ರೆ ಪ್ರಕೃತಿಯ ಸುಂದರ ನೋಟದ ಮುಂದೆ ಎಲ್ಲಾ ಗೌಣ..

ನಮ್ಮ ಪೂರ್ತಿ ಪಯಣದಲ್ಲಿ ನನಗೆ ಇಷ್ಟವಾದ ಘಟ್ಟ ಪ್ರಾರಂಭವಾಗಿದ್ದೆ ಈಗ. ನಮ್ಮ ಮುಂದಿನ ಹಾದಿ ಪ್ರಕೃತಿ ಸಿರಿಯನ್ನು ನಮಗೆ ಹೇಗೆ ನೀಡಿತೋ ಹಾಗೆ ಕಠಿಣ ಹಾದಿಯ ಸವಾಲನ್ನು ಎದುರಿಸಬೇಕಾಯಿತು. ಇದರ ಜೊತೆಗೆ ಮಳೆಯ ಹಿಮ್ಮೇಳ ಬೇರೆ ಸೇರಿ ನಮ್ಮ ಪಯಣವನ್ನು ಸುಂದರವಾಗಿಸಿತು.

ಮುಂದೆ ನಮಗಿದ್ದ ಗುರಿ ಮುಂದಿನ ಸ್ಟೇಷನ್ ಬೇಗ ಸೇರುವುದು. ಅಲ್ಲಿಂದ ಆದಷ್ಟು ಬೇಗ `ಎಡಕುಮಾರಿ' ಸ್ಟೇಷನ್ ಸೇರಿ ರಾತ್ರಿ ಕಳೆಯುವುದು. ಆದರೆ ನಮಗೆ ಸರಿ ಮಾಹಿತಿಯ ಕೊರತೆಯಿತ್ತು. ಆದರೆ ಉತ್ಸಾಹದೊಂದಿಗೆ ಹೊರಟ ನಮ್ಮ ಪಯಣಕ್ಕೆ ಮಳೆಯ ಸಾಥ್ ಬೇರೆಯಿತ್ತು. ನನಗೆ ಚಿಕ್ಕಂದಿನಿಂದ ಮಳೆಯಲ್ಲಿ ನೆನೆಯುವುದೆಂದರೆ ಎಲ್ಲಿಲ್ಲದ ಆನಂದ. ಇಲ್ಲಿ ಮಳೆಯನ್ನು ಪೂರ್ಣವಾಗಿ ಆಲಂಗಿಸಿಕೊಂಡು, ಪ್ರಕೃತಿಯ ರಸದೌತಣವನ್ನು ಸವಿಯುತ್ತಾ, ಸಾಗುವಾಗ... ಮನಸ್ಸು ಗುನುಗುತ್ತಿತ್ತು...


ಬೆಚ್ಚಗಿನ ಗಾಳಿ ಬೀಸುತ್ತಿದ್ದು, ಹೊಟ್ಟೆ ಇಷ್ಟು ಹಿಟ್ಟು ಇದ್ದು, ಸದಾ ಸುರಿವ ಮಳೆಯ ಜೊತೆ, ಪ್ರಕೃತಿಯ ರಮ್ಯನೋಟವಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೋಣ ಎಂದು ಸರ್ವಜ್ಞನ ತ್ರಿಪದಿಯನ್ನೇ ತಿರುಚಿಬಿಡುವ ಎನಿಸಿತು.

ಅದು ಹಾಗಿರಲಿ, ಮಳೆಯಿಂದ ತೊಂದರೆಯೆಂದರೆ, ಹಳಿಗಳು ಕೆಲವೊಮ್ಮೆ ಜಾರಿಗೆ ಉಂಟಾಗುತ್ತಿತ್ತು. ಆಗಾಗ ಓಡಾಡುತ್ತಿದ್ದ ಗೂಡ್ಸ್ ಗಾಡಿ ಸಾಗಿದಂತೆಲ್ಲಾ ಅದರಿಂದ ಸೋರಿದ ಆಯಿಲ್ ಹಳಿಗಳ ಪಟ್ಟಿ ಮೇಲೆ ಬೀಳುತ್ತಿತ್ತು.

ಇದರಿಂದ ಇನ್ನು ಸ್ವಲ್ಪ ಜಾರಿಗೆ ಜಾಸ್ತಿ ಆಗುತ್ತಿತ್ತು. ಮಳೆಯಿಂದ ಆದ ಇನ್ನೊಂದು ಅನನುಕೂಲವೆಂದರೆ ನಮ್ಮ ಬ್ಯಾಗ್‌ಗಳೆಲ್ಲಾ ಮಳೆಯಿಂದ ನೆಂದು ತೊಪ್ಪೆ ಆಗಿತ್ತು. ನೀರು ಬ್ಯಾಗ್ ಒಳಗೆ ಹೆಚ್ಚಾಗಿ ಇಳಿಯದಿದ್ದರೂ ನೀರು ಕೂಡಿದು ಊದಿದ ಹೆಣದಂತ್ತಿತ್ತು ಭಾರ.. ಅದನ್ನು ಹೊತ್ತು ನಡೆಯುವುದು. ಕೆಲವು ಕಡೆ ಕಷ್ಟವೇ ಆಯಿತು.

ಈಗಾಗಲೇ ಸ್ವಲ್ಪ ದೂರ ನಡೆದಿದ್ದ ಪರಿಣಾಮ ನಮ್ಮ ಕಾಲುಗಳು ಹಳಿಗಳ ಮೇಲೆ ನಡೆಯಲು synchronise ಆದಂತ್ತಿತ್ತು. ಒಟ್ಟಿನಲ್ಲಿ ಮಳೆ ನಮ್ಮನ್ನು ಅಷ್ಟಾಗಿ ಬಾಧಿಸಲಿಲ್ಲವೆನ್ನಬೇಕು.

ಮೊದಲ ಹಂತದಲ್ಲಿ `ಸಿರಿಬಾಗಿಲು' ನಿಲ್ದಾಣಕ್ಕೂ ಮೊದಲು ಸಿಗುವ ಟನಲ್ 48ರ ನಂತರ ಎಡಗಡೆ 'ಕಿನ್ನಾಲ' ಎಂಬ ಗ್ರಾಮಕ್ಕೆ ಹೋಗಲು ದಾರಿಯಿದೆ. ಈ ಟನಲ್‌ನ ಸಿಗುವ ಸೇತುವೆ (ನಂ 9 ಅಥವಾ 10 ಇರಬೇಕು) ಭಯಂಕರವಾಗಿದೆ. ಇಲ್ಲಿ ದಾಟಲು ಸ್ವಲ್ಪ ತಿಣುಕಬೇಕು.

ಅದು ಬಿಟ್ಟರೆ ಟನಲ್ 34 ನಂತರ ಸಿಗುವ ಸೇತುವೆಯ ಬಳಿ ಸುಂದರ ಜಲಪಾತದ ದೃಶ್ಯ ನಿಜಕ್ಕೂ ರಮನೀಯ. ಮುಂದೆ ಸಿಗುವ ಟನಲ್ 31 ಸುಮಾರು 533 ಮೀ. ಉದ್ದವಿದ್ದು ಮೊದಲ ಹಂತದಲ್ಲಿ ಅತಿ ಉದ್ದದ ಟನಲ್ ಎನಿಸಿದೆ.

ಇದರ ಒಳಗೆ ಕಾಲಿಟ್ಟರೆ ಕತ್ತಲೆಯೋ ಕತ್ತಲೆ. ಹೆಜ್ಜೆ ಸರಿಯಾಗಿ ಇಡದಿದ್ದರೆ ಪೆಟ್ಟು ಮಾಡಿಕೊಳ್ಳುವುದು ಗ್ಯಾರಂಟಿ. ಒಳಗಿದ್ದಾಗ ಏನಾದರೂ ಟ್ರೈನ್ ಬಂದರೆ ಪಕ್ಕದಲ್ಲಿ ಇರುವ ಅರ್ಧ ಅಡಿ ಜಾಗದಲ್ಲಿ ಅವಿತುಕೊಳ್ಳಬೇಕಾಗುತ್ತದೆ. ಇಲ್ಲಾ ನಾನು ನಿಂತಿರುತ್ತೀನಿ ಅಂದರೆ ಕಷ್ಟ. ಒಂದೆಡೆ ರೈಲಿನ ಶಬ್ದ, ಜೊತೆಗೆ ಅಕಸ್ಮಾತ್ ಬೋಗಿಯ ಬಾಗಿಲು ತೆರೆದುಕೊಂಡರೆ ಅದರ ಜೊತೆಗೆ ಪರಲೋಕಕ್ಕೆ ಪಯಣ ಗ್ಯಾರಂಟಿ.


ಇದು ಟನಲ್ ಒಳಗಿನ ಕಥೆಯಾದರೆ, ಇನ್ನು ಸೇತುವೆ(ಬ್ರಿಡ್ಜ್) ದಾಟುವಾಗ ತುಂಬಾ ಹುಷಾರಾಗಿರಬೇಕು. ಮೈಯಲ್ಲಾ ಕಿವಿಯಾಗಿರಬೇಕು ಅಂತಾರಲ್ಲ ಹಾಗಿರಬೇಕು. ಬ್ರಿಡ್ಜ್ ದಾಟುವಾಗ ರೈಲಿಗೆ ಎದುರಾದರೆ ದೇವರೆ ಗತಿ. ವೆರಿ ವೆರಿ ಹಾರ್ಡ್ ಟು ಎಸ್ಕೇಪ್.. ಈ ಹಾದಿಗೆ 'ಎಸ್ಕೇಪ್ ರೂಟ್' ಅಂತಾ ಕೆಲವೊಮ್ಮೆ ಕರೆಯೊದು ಇದಕ್ಕೆ ಇರಬೇಕು. 'ಮತ್ತೆ ನೀವು ಹೇಗೆ ಎಸ್ಕೇಪ್ ಆದ್ರಿ ನಿಮಗೆ ರೈಲು ಎದುರಾಗಲಿಲ್ಲವೇ?' ಇದು ಎಲ್ಲರೂ ನಮ್ಮನ್ನು ಕೇಳಿದ ಸಾಮಾನ್ಯ ಪ್ರಶ್ನೆ.

ಸೇತುವೆ ದಾಟಲು ನಾವು ಅನುಸರಿಸಿದ ಕ್ರಮ ಹೀಗಿತ್ತು:

ಮೊದಲು ವರ್ಲಿನ್ ಅಥವಾ ನಾನು ದಾಟುತ್ತಿದ್ದೆವು. ನಂತರ ಉಳಿದವರು. ರೈಲು ಶಬ್ದ ಗ್ರಹಿಸುವಲ್ಲಿ ವರ್ಲಿನ್ ಪರಿಣತನಂತೆ ಕೆಲಸ ಮಾಡಿದ. ಹಿಂದೆ ಬರುತ್ತಿದ್ದ ವೀರಿ, ಶಿವ ಇಬ್ಬರನ್ನು ಸಾಗಿಸಿಕೊಂಡು ಬಂದಿದ್ದು ಸೋಮನ ಸಾಧನೆ. ಎಷ್ಟೊ ಸಾರಿ ಬೇರ್‍ಯಾವ ಶಬ್ದ ಕೇಳಿಸದ ಅಲ್ಲಿ.. ಕೇಳಿಸುವ ಶಬ್ದವೆಲ್ಲ ರೈಲಿನ ಶಬ್ದದಂತೆ ಭ್ರಮೆ ಹುಟ್ಟಿಸುತ್ತಿತ್ತು.ಅಲ್ಲಿಂದ ಮುಂದೆ ಹೆಚ್ಚಿನ ವಿಶೇಷವಿಲ್ಲದೆ ಸುಮಾರು ೪ರ ಹೊತ್ತಿಗೆ ಒಂದು ನಿರ್ಮಾಣ ಹಂತದಲ್ಲಿರುವ ನಿಲ್ದಾಣವನ್ನು ತಲುಪಿದೆವು.

ಒಂದೆರಡು ಗುಡಿಸಿಲಿನ ತರಾನೇ ಕಾಣುತ್ತಿದ್ದ ಕೊಠಡಿಗಳ ನಿರ್ಮಾಣ ಸಾಗಿತ್ತು. ಮುಂದಿನ ಹಾದಿಯ ವಿವರವನ್ನು ಪೂರ್ಣವಾಗಿ ತಿಳಿದಿದ್ದು ಇಲ್ಲೇ. ಅಲ್ಲಿಯ ಒಬ್ಬ ಕೆಲಸಗಾರ (ನಮ್ಮ ಚಿಂತೆಯಲ್ಲಿ ಆತನ ಹೆಸರು ಕೇಳಲೇ ಇಲ್ಲ ನಾವು. ಹೆಸರಲ್ಲೇನಿದೆ ಅಂತಿರಾ.॒)ಅಲ್ಲಿಂದ 'ಎಡಕುಮಾರಿ ಸ್ಟೇಷನ್‌ಗೆ ಇದ್ದ ದೂರ ನಾವು ಕ್ರಮಿಸಲು ತೆಗೆದುಕೊಳ್ಳಬಹುದಾದ ಸಮಯವನ್ನು ಲೆಕ್ಕ ಹಾಗಿ ಸರಿಯಾಗಿ ಹೇಳಿದ.

ಓಹ್. . .. ಈ ನಿಲ್ದಾಣದ ಹೆಸರೇ ಹೇಳಿಲ್ಲ ಅಲ್ವಾ.. ಈ ನಿಲ್ದಾಣದ ಹೆಸರು 'ಅರೆಬೆಟ್ಟ'.

ಇಲ್ಲಿನ ಕಾರ್ಮಿಕ ಸರಿಯಾಗಿ ನಮಗೆ ದಾರಿ ತೋರಿದ `ಅರೆಬೆಟ್ಟ' 75 ಕಿಮೀ ಮೈಲಿಗಲ್ಲಿನಲ್ಲಿ ಸಿಗುತ್ತದೆ. ಅಲ್ಲಿಂದ ಸರಿಯಾಗಿ 8 ಕಿಮೀಗೆ ನಾವು ಸೇರಬೇಕಾಗಿದ್ದ ಸ್ಥಳ ಇದೆ. ಶಿವನಿಗೆ ಸದ್ಯ ಇನ್ನು 8 ಕಿಮೀ ಅಂತಾ ಕೇಳಿದ್ದೆ ತಡ ಹೊರಡಲು ಅವಸರ ಮಾಡಿದ. `ಇಲ್ಲೇ ರಾತ್ರಿ ಕಳೆದು ಮುಂಜಾನೆ ಬೇಗ ಹೊರಡಿ' ಎಂದ ಕಾರ್ಮಿಕನ ಅಹ್ವಾನವನ್ನು ತಿರಸ್ಕರಿಸಿ ಇಲ್ಲೇ ಉಳಿದರೆ ಇನ್ನು ನಾಳೆಗೆ ತುಂಬಾ ನಡೆಯಬೇಕಾಗುತ್ತದೆ ಎಂದು ಶಿವನ ಅವಸರದಲ್ಲಿ ನಾವು ಭಾಗಿಗಳಾಗಿ ಅಲ್ಲಿಂದ ನಡೆದೆವು.

ಶಿಸ್ತಿನ ಸಿಪಾಯಿಗಳಂತೆ ಗಂಟೆಗೆ 4 ಕಿಮೀ ಸರಾಸರಿಯಲ್ಲಿ ಸುಮಾರು 10 ಸೇತುವೆ ಹಾಗೂ 13 ಟನಲ್ ಸುರಿವ ಮಳೆಯನ್ನು ಲೆಕ್ಕಿಸದೆ, ಅಷ್ಟು ಬೇಗ ಹೇಗೆ ದಾಟಿದೆವೋ ಗೊತ್ತಿಲ್ಲ. `ಎಡಕಮಾರಿ' ತಲುಪಿದಾಗ ಖುಷಿಯೋ ಖುಷಿ.

`ಎಡಕಮಾರಿ', 'ಎಡಕುಮೇರಿ', 'ಎಡಕುಮಾರಿ' ಏನಾದರೂ ಕರೆಯಲಿ ಜನ ಬೇಕಾದರೆ ನಮಗೇನೂ ಹೆಸರು ಕಟ್ಟಿಕೊಂಡು, ಕತ್ತಲಲ್ಲಿ ಬೆಳಕು ಕಂಡಂತಾಯಿತು ಸ್ಟೇಷನ್ ತಲುಪಿದಾಗ.


ಎಲ್ಲರಿಗಿಂತ ಖುಷಿಯಾಗಿದ್ದು ನಿಧಾನವಾಗಿ ನಡೆದುಬಂದ ಶಿವನಿಗೆ(ಶವದಪಥಸಂಚಲನ) ತೊಡೆಯಲ್ಲಿ ಉಂಟಾದ ಘರ್ಷಣೆ ಹಾಗೂ ಮಳೆಯ ಜೊತೆಗೆ ಇದ್ದ high humidity ಗೆ ತುಂಬಾ ಸುಸ್ತಾಗಿದ್ದ. ನಿಲ್ದಾಣದೊಳಗೆ ಕಾಲಿಟ್ಟೊಡನೆ ಸುಮಾರು 10-11 ಜನರ ಗುಂಪು ನಮ್ಮನ್ನು ಸುತ್ತುವರಿಯಿತು.

ನಮ್ಮ ಕೈಲಿದ್ದ ಕೋಲನ್ನು ಪಕ್ಕಕ್ಕಿಟ್ಟು, ಮೈಯಿಂದ ಇಳಿಯುತ್ತಿದ್ದ ನೀರು ಪೂರ್ತಿ ಇಳಿಲಿ ಅಂತಾ ಕಾರಿಡಾರ್‌ನಲ್ಲೇ ನಿಂತಿದ್ದೆವು. ಯಾರಪ್ಪ ಇವರೆಲ್ಲ ಅಂತಾ ನೋಡುವಾಗ...ಹತ್ತಿರ ಬಂದ ಒಬ್ಬ ಗಜಗಾತ್ರದ ವ್ಯಕ್ತಿ ಎಲ್ಲರ ಕೈಕುಲಕತೊಡಗಿದ. ಯಾಕೆ ಅಂದರೆ... ಪರವಾಗಿಲ್ಲ ಮಳೆಯಲ್ಲೇ ಟ್ರೆಕ್ಕಿಂಗ್ ಮಾಡಿದ್ದಿರಾ ಗುಡ್ ಗುಡ್ ಅಂದ. ಸರಿ ಅಲ್ಲಿಂದ ಶುರುವಾಯ್ತು. ಒಬ್ಬೊಬ್ಬರ ಪ್ರಶ್ನಾವಳಿ ಇಲ್ಲಿಂದ ಇನ್ನು ಎಷ್ಟು ದೂರ ಇದೆ.

ಬ್ರಿಡ್ಜ್‌ಗೆ ಪ್ಲೇಟಿಂಗ್ ಹಾಕಿದ್ದಾರೆ, ತುಂಬಾ ಮಳೆನಾ, ದೊಡ್ಡ ಟನೆಲ್ ಏನಾದರು ಇದೆಯಾ.. ಎಲ್ಲದ್ದಕ್ಕೂ ಉತ್ತರ ಹೇಳಿ ಅವರ ಉತ್ಸಾಹವನ್ನು ತಣಿಸಿದೆವು. ಬೆಳಗ್ಗೆ 9 ಕ್ಕೆ `ಕುಕ್ಕೆ' ಬಿಟ್ಟು ಸುಮಾರು 9 ಗಂಟೆಯಲ್ಲಿ 28 ಕಿಮೀ ಕ್ರಮಿಸಿದ್ದು ಮಹತ್ ಸಾಧನೆಯಂತೆ ತೋರಿತ್ತು, ಮಧ್ಯ ವಯಸ್ಕರ ಆ ತಂಡಕ್ಕೆ. ಒದ್ದೆಯಾದ ಬಟ್ಟೆಗಳನ್ನು ಅಲ್ಲೇ ತಂತಿಯ ಮೇಲೆ ಹರಡಿದೆವು. ಸಂಜೆ ಏಳಾದರೂ ಮಳೆ ಸುರಿತ್ತಿತ್ತು. ಆದರೆ ಕುಳಿರ್ಗಾಳಿಯ ಸುಳಿವಿರಲಿಲ್ಲ.

ಮುಂದಿನ ಅವರ ಪಯಣದ ಬಗ್ಗೆ ಕೇಳಿದಾಗ.. ರೈಲಿಗಾಗಿ ಕಾಯುತ್ತಿದ್ದು, ಬಂದೊಡನೆ ಕುಕ್ಕೆಗೆ ಪಯಣಿಸಿ, ಕುಮಾರಪರ್ವತ ಚಾರಣ ಮಾಡುತ್ತಿದ್ದೇವೆ ಎಂದರು. ಸುಮಾರು 8 ರ ಸುಮಾರಿಗೆ ಅವರನ್ನು ಬೀಳ್ಕೊಟ್ಟೆವು. ಇಲ್ಲ ಅವರೇ ನಮ್ಮಿಂದ ಕಳಚಿಕೊಂಡರು. ಅವರ ಸಲಹೆಯಂತೆ ನಾವು ತಂದಿದ್ದ ಅಕ್ಕಿಯನ್ನು ಸ್ಟೇಷನ್‌ನ ಸಿಬ್ಬಂದಿ ಒಬ್ಬರಿಗೆ ನೀಡಿ ಅನ್ನವನ್ನು ಸಂಪಾದಿಸಿದೆವು.

ಬರಿ ಬಿಸ್ಕೆಟ್, ಇಡ್ಲಿ ರುಚಿ ಕಂಡಿದ್ದ ನಮ್ಮ ಹೊಟ್ಟೆ, ಬಿಸಿ ಬಿಸಿ ಪುಳಿಯೋಗರೆಯನ್ನು ಕಂಡು ಪುಳಕಗೊಂಡಿತು. ಕ್ಷಣಾರ್ಧದಲ್ಲಿ ಖಾಲಿ ಮಾಡಿದೆವು. ಸ್ಟೇಷನ್‌ಮಾಸ್ಟರ್‌ಗೆ ಸಲಾಂ ಹಾಕಿ ಮುಂದಿನ ಮಾರ್ಗದ ಬಗ್ಗೆ ಕೇಳಿದೆವು. ಅವರು ಮಾತು ನಡೆ ಯಾವುದೇ ಸರ್ಕಾರಿ ಅಧಿಕಾರಿಗಳಿಗಿಂತ ಭಿನ್ನವಾಗಿರಲಿಲ್ಲ. ಇದ್ದುದ್ದರಲ್ಲಿ ಪರವಾಗಿಲ್ಲ ಅನ್ನಬಹುದು.

ಅಲ್ಲಿಂದ ಮುಂದೆ ಹೋಗುವ ರೀತಿ ಬಗ್ಗೆ ವಿಧವಿಧದ ಐಡಿಯಾ ಕೊಟ್ಟರು. ರಾತ್ರಿ ಬೇಕಾದರೆ ಇಲ್ಲಿ ಉಳಿದುಕೊಳ್ಳಿ.

ನಾಳೆ 8 ರ ಒಳಗೆ ಯಾವುದಾದರೂ ಟ್ರೈನ್ ಸಿಗಬಹುದು. ಯಾವ ಕಡೆಗೆ ಅಂತಾ ಹೇಳೊಕ್ಕಾಗಲ್ಲ, ಕುಕ್ಕೆ ಕಡೆಗಾದರೂ ಸಿಗಬಹುದು, ಅಥವಾ ಸಕಲೇಶಪುರಕ್ಕಾಗದರೂ ಸಿಗಬಹುದು. ಯಾವ ಸಮಯಕ್ಕೆ ಅಂತಾ ಹೇಳೊಕ್ಕೆ ಬರೋಲ್ಲ. ಬೇಗ ಸಿಗ್ಗಿದ್ದರೆ ನಿಮ್ಮ ಪುಣ್ಯ .. ಹೀಗೆ ಸಾಗಿತ್ತು ಸ್ಟೇಷನ್ ಮಾಸ್ಟರ್ ಹಾಗೂ ಲೈನ್‌ಮನ್ (ಬೇರೆ ಹೆಸರಿರಬಹುದು ಆ ಕೆಲಸಕ್ಕೆ..ಗೊತ್ತಿಲ್ಲ) ಅವರ ಮಾತುಗಳು ಪುಂಖಾನುಪುಂಖವಾಗಿ...

ಇಷ್ಟೆಲ್ಲಾ ಕಥೆ ಅವರ ಹತ್ರ ಕೇಳಿದ್ದು ಶಿವನ ಪರಿಸ್ಥಿತಿ ನೋಡಿ.. . .


ನಮ್ಮ ಲೆಕ್ಕಾಚಾರದ ಪ್ರಕಾರ ಏನಿಲ್ಲ ಅಂದ್ರೂ ಇನ್ನೂ 18 ಕಿಮೀ ಕ್ರಮಿಸಬೇಕಾಗಿತ್ತು ಸಕಲೇಶಪುರದ ಬಳಿ ತಲುಪಲು. ಊಟ ಮಾಡುವಾಗ ಸೋಮ ಶಿವನಿಗೆ ಕೇಳ್ದ 'ಇನ್ನು 15 ಕಿಮೀ ನಡೆಯಬೇಕು. ಏನು ಮಾಡ್ತೀಯಾ ಅಂತಾ.'

ಊಟ ತಿಂದ ಖುಷಿಯಲ್ಲಿ ಶಿವ 'ನಿಧಾನ ಆದ್ರೂ ಚಿಂತೆಯಿಲ್ಲ ಮುಂದಿಟ್ಟ ಹೆಜ್ಜೆ ಹಿಂದೆ ಇಡೋದು ಬೇಡ. ನನಗೆ ಸುಸ್ತೇನೂ ಇಲ್ಲ. ಸ್ವಲ್ಪ ತೊಡೆ ನೋವು ಅಷ್ಟೇ' ಅಂದ.

ರಾತ್ರಿ ಚೆನ್ನಾಗಿ ನಿದ್ದೆ ಮಾಡಿದೆವು ಎಂದು ಹೇಳಲಾರೆ. ಹಾಸುವುದಕ್ಕೆ, ಹೊದೆಯಲು ಬೇಕಾದ ವ್ಯವಸ್ಥೆ ಅವರವರೇ ಮಾಡಿಕೊಳ್ಳಬೇಕಿತ್ತು. ಸೋಮ ಜೊತೆಗೆ ಯಾವುದಕ್ಕೂ ಇರಲಿ ಅಂತಾ ಟೆಂಟ್ ಹಾಕಲು ಶೀಟ್ ಕೂಡ ತಂದಿದ್ದ. ಸ್ಟೇಷನ್ ತಲುಪಲಿಲ್ಲ ಅಂದರೆ ಯಾವುದಾದರೂ ಟನಲ್‌ನಲ್ಲಿ ಟೆಂಟ್ ಹಾಕಬೇಕಾಗಿತ್ತು. ಆದ್ರೆ ಆ ಅನುಭವ ನಮಗಾಗಲಿಲ್ಲ.

ಎಲ್ಲರೂ ನಿದ್ದೆಗೆ ಜಾರುತ್ತಿದ್ದರೆ ವೀರೇಶನಿಗೆ ಯಾರದ್ರೂ(ಕಳ್ಳ!! ನಿರ್ಜನ ಪ್ರದೇಶದಲ್ಲಿ) ಬಂದೂ ಏನಾದ್ರೂ ಹೊತ್ತೊಯ್ದಾರು ಅನ್ನೋ ಮಹಾನ್ ಕಾಳಜಿ. ಸರಿಯಾಗಿ ನಿದ್ದೆ ಮಾಡಿದ್ನೋ ಇಲ್ಲ್ವೋ ಪುಣ್ಯಾತ್ಮ. ಒಂದೆರಡು ಸರಿ ನನ್ನನ್ನೂ ಎಬ್ಬಿಸಿದ್ದ. ಏನೋ ಶಬ್ದ, ಯಾವುದೋ ಹುಳ ಬಂತು ಅಂತಾ..


ರಾತ್ರಿ ಒಂದೆರಡು ಬಾರಿ ರೈಲು ಓಡಾಡಿದ ಶಬ್ದ ಕೇಳಿದ್ದು ಬಿಟ್ಟರೆ. ಬೆಳಗ್ಗೆ ಮೊಬೈಲ್ ಅಲಾರಂ ಹೊಡೆದುಕೊಳ್ಳೊವರೆಗೂ ನಮಗೆ ನಿದ್ದೆ ಆವರಿಸಿತ್ತು. ಬೆಳಗ್ಗೆ ಎದ್ದೊಡನೆ ರೈಲಿನ ಶಬ್ದ ನಮ್ಮನ್ನು ಎಚ್ಚರಿಸಿತು. ಇಲ್ಲ ಕಣ್ರೋ ಅದು ಭ್ರಮೆ ಅಂದೆ ನಾನು. ಅದಕ್ಕೆ ಸೋಮ, ವರ್ಲಿನ್ ಎಲ್ಲಾ ಸರಿಯಾಗಿ ಕೇಳಿಸಿಕೋ ರೈಲು ಬರುತ್ತಾ ಇರೋದು ಖಂಡಿತಾ ಅಂದ್ರು. ಸರಿ ಬೇಗ ಬೇಗ ಎದ್ದು ಪ್ಯಾಕ್ ಮಾಡಿಕೊಂಡು ಟ್ರೈನ್ ಹಿಡಿದು ಸಕಲೇಶಪುರಕ್ಕೆ ಹೋಗೋಣ ಅಂತಾ ರೆಡಿ ಆದ್ವಿ. ಓಡಿಬಂದ್ವಿ ರೈಲು ಬಂತು ರೈಲು ಅಂತಾ...

ರೈಲಿಗೆ ಸಿಗ್ನಲ್ ತೋರಿಸುತ್ತಿದ್ದ ಆ ಲೈನ್‌ಮನ್ ಹೇಳ್ದ (ಕೊರೆದ) 'ಇಲ್ಲಾ ಬಿಡಿ ಹತ್ತಿಸಿಕೊಳ್ಳೋಲ್ಲ. ಡ್ರೈವರ್ ಸರಿಯಿಲ್ಲ. ರಾತ್ರಿ ಎದ್ದಿದ್ದರೆ ಹೋಗಬಹುದಿತ್ತು. ನಿನ್ನೆ ಒಂದು ಟೀಮ್‌ನ ಕರೆದುಕೊಂಡು ಹೋಯ್ತಲ್ಲ ಅದೇ ಟ್ರೈನ್ ಬಂದಿತ್ತು ರಾತ್ರಿ ಈ ಕಡೆಗೆ. ಸುಮಾರು ಹೊತ್ತು ನಿಲ್ಸಿತ್ತು. ನಾನು ಬಂದು ನೋಡಿದೆ. ನಿಮ್ಮಲ್ಲಿ ಯಾರಿಗೂ ಎಚ್ಚರವಿರಲಿಲ್ಲ'.

ಬೆಳ್ಳಂಬೆಳಗ್ಗೆ ಕೊರತ ಶುರುವಾಯ್ತು, ಅಂದುಕೊಂಡು ಕಾರಿಡಾರ್ ನಿಂದ ನಾವಿದ್ದೆಡೆಗೆ ಬಂದೆವು.

ತಿರುಗ ನಿದ್ದೆಗೆ ಜಾರುವ ಮನಸ್ಸು ಯಾರಿಗೂ ಇರಲಿಲ್ಲ. ಅಲ್ಲೇ ಫೋಟೋ ಸೆಷನ್ ಮಾಡ್ತ ಇದ್ದ್ವಿ. ಸ್ಟೇಷನ್ ಮಾಸ್ಟರ್‌ನಿಂದ ಬುಲಾವ್ ಬಂತು. ಮತ್ತೆ ಕೊರೆತ ಅಂತಾ ಸೋಮನ್ನ ಕಳಿಸಿದ್ವಿ. ಹೊರಬಂದು ಸೋಮ ಹೇಳ ತೊಡಗಿದ `ಇನ್ನು ಟ್ರೈನ್ ಬರೋಲ್ಲ, ಟ್ರಾಲಿಗಳು ಬರಬಹುದು ಕೆಲಸಗಾರರನ್ನು ಹೊತ್ತುಕೊಂಡು, ಅದರಲ್ಲಿ ಹೋಗಬಹುದು ನೀವು...ಇತ್ಯಾದಿ ಜೊತೆಗೆ ರಾತ್ರಿ ಉಳಿದಿದ್ದಕ್ಕೆ ಒಂದಿಷ್ಟು ದುಡ್ಡು ಕೊಡಬೇಕು (ಅದನ್ನು ಅನ್ನ ಮಾಡಿಕೊಟ್ಟ ಸಿಬ್ಬಂದಿಗೆ ಕೊಡುತ್ತೇವೆ ಅಂದ್ರಂತೆ)...

ಆಗಲೇ ಬೆಳಕು ಹರಿದು ತುಂಬಾ ಸಮಯ ಆಗಿತ್ತು. ಇನ್ನು ಹಿಂದೆ ಹೆಜ್ಜೆ ಇಡುವ ಮನಸ್ಸಿರಲಿಲ್ಲ. ಟ್ರಾಲಿಗಾಗಿ ಕಾಯೋದರಲ್ಲಿ ಅರ್ಥ ಇಲ್ಲ ಅಂತಾ ತೀರ್ಮಾನಿಸಿದೆವು. ಸ್ಟೇಷನ್ ಮಾಸ್ಟರ್ ಕೈಗೆ ಒಂದಿಷ್ಟು ತುರುಕಿ(ಸ್ವಲ್ಪ ಹೆಚ್ಚೇ) ಅಲ್ಲಿಂದ ಹೊರಟಾಗ ಸುಮಾರು 7:15 ಗಂಟೆ....

ಮುಂದೆ ಇನ್ನು ಎಷ್ಟು ದೂರ ಅಂತಾ ಸರಿಯಾಗಿ ತಿಳಿದಿರಲಿಲ್ಲ. 12 ರಿಂದ 18 ಅಥವಾ 8 ರಿಂದ ಹತ್ತು ಕಿಮೀ ದಾಟಿದರೆ ಸಿಗುವ 'ದೋಣಿಗಾಲ್' ನಿಲ್ದಾಣ ಸಿಗುತ್ತೆ ಎಂದಷ್ಟೇ ತಿಳಿತು. ಶಿವನಿಗೆ ಇನ್ನು 8 ಕಿಮೀ ಮಾತ್ರ ಅಂತಾ ಹೇಳಿ ಹುರಿದುಂಬಿಸಿ ಅವನಿಗೆ ಲೀಡ್ ಮಾಡು ಅಂದೆವು.

ಹುರುಪಿನಿಂದ ಹೊರಟ ನಮ್ಮ ಪಯಣ 67ನೇ ಕಿಮೀ ಮೈಲುಗಲ್ಲಿನಿಂದ ಶುರುವಾದರೂ.ನಿನ್ನೆಯಂತೆ ಇಂದಿನ ಪಥ ಸಂಚಲನ 232 ಮೀ ಉದ್ದದ ಟನಲ್‌ನಿಂದ ಸರಿಯಾಗಿ ಪ್ರಾರಂಭವಾಯಿತು ಎನ್ನಬೇಕು.


ಓಹ್...ಹೇಳೋದು ಮರೆತಿದ್ದೆ. ಇಷ್ಟೊಂದು ದೂರದ ಹಾದಿ ಸವೆದರೂ ನಮಗೆ ಎಲ್ಲೂ 'ಇಂಬಳ' (leech) ಕಾಟ ಕೊಡಲಿಲ್ವಾ ಅಂತಾ ಕೇಳಿದ್ರಾ...? ಸಿಕ್ಕಿತ್ತು ಸ್ವಾಮಿ, ಒಮ್ಮೆ ಹಿಂದಿನ ದಿನ ಬೆಳಗ್ಗೆ ತಿಂಡಿ ಮುಗಿಸಿ ಹೊರಡುವಾಗ. ವರ್ಲಿನ್ ಕಾಲಿಗೆ ತಗಲಿಕೊಂಡಿತ್ತು.

ಮತ್ತೊಮ್ಮೆ ರಾತ್ರಿ ಮಲಗುವ ಮುನ್ನ ಕಾಣಿಸಿತ್ತು. ಅದೇನೋ ಯಾವಾಗಲೂ ನನ್ನ ರಕ್ತ ಹೀರುತ್ತಿದ್ದ ಇಂಬಳಗಳು ನನ್ನ ಬಳಿ ಸುಳಿಯಲೇ ಇಲ್ಲ. ಇನ್ನೊಂದು ಕಥೆ ಹೇಳಲೇಬೇಕು. ನನ್ನ ಗ್ಲೈಡರ್ಸ್ ಚಪ್ಪಲಿ ಹರಿದುಕೊಳ್ಳತೊಡಗಿದ್ದು, ಹಾಗೆ ನಾನು ಸುಮಾರು ದೂರ ಕಾಲು ಸವೆಸಿದ್ದು. ನಂತರ ಗ್ಲೈಡರ್ಸ್ ಕೈ ಸೇರಿ ಬರಿಗಾಲಿನಲ್ಲಿ ಸೇತುವೆ ದಾಟಿದ್ದು. ಯಾವತ್ತಿನ ಹರಕೆನೋ ಕಾಣೆ. ಕಡೆಗೆ ಶಿವನ ಪಾದರಕ್ಷೆಗೆ ಮೊರೆ ಹೋಗಬೇಕಾಯಿತು.

ಆದ್ರೂ ನನ್ನ ಪುಟ್ಟ ಪಾದಗಳಿಗೆ ದೊಡ್ಡದಾದ ಅವನ ಪಾದರಕ್ಷೆಗಳು ಬ್ರಿಡ್ಜ್ ಬಂದಾಗ ಕೈ ಸೇರುತ್ತಿತ್ತು. ನಾನು ವರ್ಲಿನ್ ಪಾದರಕ್ಷೆಯಲ್ಲೇ ದೂರವನ್ನು ಕ್ರಮಿಸಿದರೆ, ಉಳಿದವರು ಷೂಗೆ ಮೋರೆ ಹೋಗಿದ್ದರು.

ಮೊದಲ ಬಾರಿಗೆ ಹೋಗುವವರು ಷೂ ಬಳಸಿದರೆ ಒಳಿತು. ನಮ್ಮ ಹುಡುಗರುಸಾಕ್ಸ್ ಒಳಗೆ ಕವರ್ ತುರುಕಿ ಪ್ಯಾಕ್ ಮಾಡಿಕೊಂಡು ಷೂಗಳನ್ನು ವಾಟರ್ ಫ್ರೂಫ್ ಮಾಡಿಕೊಂಡಿದ್ದರು.

ಸರಿ, ಎಲ್ಲಿದ್ದಿವಿ ಈಗ ಐ ಥಿಂಕ್...ಟನಲ್ ನಂ 14.... 232 ಮೀಟರ್ ಉದ್ದ...

ಮುಂದೆ ಇನ್ನು ಎರಡು ಟನಲ್‌ಗಳು ಎದುರಾದವು. ಆದರೆ ನಂತರ ಸಿಕ್ಕ ಟನಲ್ ಅತಿ ಉದ್ದದ ಟನಲ್ ಅದರ ನಂ. 11. ಉದ್ದ ಸುಮಾರು 572 ಮೀ( ಸುಮಾರು ಅರ್ಧ ಕಿಮೀ) ಕಗ್ಗತ್ತಲ ಗವಿಯಲ್ಲಿ ಒಕ್ಕೆವು. ಟ್ರೈನ್ ಅಥವಾ ಟ್ರಾಲಿ ಬರುವಿಕೆಯ ಶಂಕೆ ಇರಲಿಲ್ಲ. ಏಕೆಂದರೆ ಆಗಲೇ ಸ್ಟೇಷನ್ ಮಾಸ್ಟರ್ ಹೇಳಿದ ಸಮಯ ಮೀರಿತ್ತು.

ಕತ್ತಲಲ್ಲಿ ಸಂಚರಿಸುವಾಗ 3 ಜನ ಒಂದು ಗುಂಪಾಗಿ, ಇನ್ನಿಬ್ಬರು ಒಂದು ಗುಂಪಾಗಿ ಸಂಚರಿಸುತ್ತಿದ್ದೆವು. ಮಳೆಯ ಕಾರಣ ನಮ್ಮ ಬಳಿ ಇದ್ದ 30 ರೂ ಟಾರ್ಚಗಳೇ ನಮಗೆ ದಾರಿದೀಪವಾಗಿ ಸಹಾಯಮಾಡಿದವು.

ಟನೆಲ್‌ನ ನಂತರ ಸಿಗುವ ಸೇತುವೆಯ ಇಕ್ಕೆಲದಲ್ಲಿ ನಯನ ಮನೋಹರ ದೃಶ್ಯವಿದೆ. ಮೋಹಕ ಜಲಪಾತದಿಂದ ಪ್ರಕೃತಿಯ ಮೆರಗು ಇನ್ನೂ ಹೆಚ್ಚಾಗಿ ಕಣ್ಣಿಗೆ ಹಬ್ಬವೆನಿಸುತ್ತದೆ. ಮುಂದೆ ನಮಗೆ ಸುಮಾರು 5 ಟನೆಲ್‌ಗಳು ಸಿಕ್ಕವು ಯಾವುದೂ ತುಂಬಾ ಉದ್ದವಿರಲಿಲ್ಲ. ಅಷ್ಟೇ ಸಂಖ್ಯೆಯ ಬ್ರಿಡ್ಜ್ ಗಳನ್ನು ಹಾದೆವು.

ನಂತರ ಸಿಕ್ಕಿದ್ದೆ 'ಕಡಗರಹಳ್ಳಿ' ಸ್ಟೇಷನ್. ಇದು ಕೂಡ ನಿರ್ಮಾಣ ಹಂತದಲ್ಲಿದೆ. ಅಲ್ಲಿದ್ದ ಕೆಲಸಗಾರರಿಂದ ಸೂಕ್ತ ಮಾಹಿತಿ ಪಡೆದೆವು. ಬೆಳಗಿನ ಉಪಹಾರ ಇಲ್ಲೇ ಮುಗಿಸುವುದೆಂದು ತೀರ್ಮಾನಿಸಿ. ಅಡುಗೆ ಮಾಡಲು ಅನುಮತಿ ಪಡೆದೆವು.

ಬಾಣಸಿಗರ ಬವಣೆ...9.30 ಕ್ಕೆ ಶುರು


ಒಣಗಿದ ಸೌದೆ ತರಲು ನಾನು ಅಮೇಲೆ ವೀರಿ ಇಬ್ಬರು ಸೇರಿ ಹೋದೆವು. ಒಂದಿಷ್ಟು ಕಲೆ ಹಾಕಿದೆವು. ಆದರೆ ಅದರಲ್ಲಿ ಎಷ್ಟೊಂದು ತುಂಡುಗಳು ಮಳೆಯಲ್ಲಿ ನೆಂದಿದ್ದರಿಂದ. ಒಲೆ ಉರಿಸಲು ಸ್ವಲ್ಪ ತ್ರಾಸಾಯಿತು. ಸೋಮ, ವರ್ಲಿನ್ ಒಲೆಗೆ ಕಿಚ್ಚು ಹಚ್ಚುವ ಕಾರ್ಯದಲ್ಲಿ ಮಗ್ನರಾಗಿದ್ದರು. ಶಿವನ ಕೈ ಸಿಗ್ಗಿದ್ದು, ಮಂಗನ ಕೈಗೆ ಮಾಣಿಕ್ಯ ಸಿಕ್ಕಂತಾಗಿತ್ತು. ಸಿಕ್ಕಿದ ಜಾಗವನ್ನೆಲ್ಲ ಸೆರೆ ಹಿಡಿಯತೊಡಗಿದ್ದ.

ಇತ್ತ ವೀರಿಗೆ ಸಹನೆ ಮೀರಿತ್ತು. ಹಸಿದ ಅವನ ಮನ ನಾವು ಹೇಳಿದ ಎಲ್ಲಾ ಕೆಲಸ ಮಾಡಲು ತಯಾರಾಗಿತ್ತು. ಪಾತ್ರೆ ತೊಳೆದು, ಅಕ್ಕಿ ತೊಳೆದು, ನೀರು ತಂದು ಕೊಟ್ಟ. ಅಲ್ಲಿಗೆ ನಿಲ್ಲಲಿಲ್ಲ.

ನಂತರ ಅಲ್ಲಿನ ಕಾರ್ಮಿಕರಿಂದ ಎರಡು ತಟ್ಟೆ ಕೂಡ ಸಂಪಾದಿಸಿದ. ಆದ್ರೆ ಒಲೆ ಇನ್ನೂ ಹತ್ತಿರಲಿಲ್ಲ ಸರಿಯಾಗಿ. ಏನಾದರೂ ಹತ್ತದೆ ಆಟ ಆಡಿಸುತ್ತಿತ್ತು ಬೆಂಕಿ. ಕಡೆಗೂ ನಮ್ಮ ಗೋಳು ನೋಡಕ್ಕೆ ಆಗದೆ ಬೆಂಕಿ ಉರಿಯ ತೊಡಗಿತು. ಅಂತೂ ಅನ್ನ ರೆಡಿ ಮಾಡಿ . ನೀರು ಬಸಿದು ಹರಿವಿದ್ದು ಆಯಿತು. ಈ ಗಲಾಟೆಯೆಲ್ಲ ಶಿವ ಕೆಮರಾದಲ್ಲಿ ವಿಡಿಯೋ ಮಾಡುತ್ತಿದ್ದ.

ಅವನ ಯೋಚನಾ ಲಹರಿಗೆ ಒಂದು ಸ್ಯಾಂಪಲ್ ಅಂದ್ರೆ. 'ಅಬ್ಬಾ ನಾನು ಇಲ್ಲಿಂದ ಹೋದ ಮೇಲೆ ಮೊದಲು ಪ್ರೆಟಿ ಬಾಯ್ ಮತ್ತೆ ತೆರೆ ಬಿನಾ ಸಾಂಗ್ ಕೇಳಬೇಕು ಅಂತಿದ್ದ'. ನಗರ ಜೀವನದ ಸವಿವುಂಡವನಿಗೆ ಪಕೃತಿ ಮಡಿಲಿನಿಂದ ಹೊರಬೀಳುವ ಮನಸ್ಸು ಹೇಗೆ ಬಂತೋ ನಾ ಕಾಣೆ.. ಪುಣ್ಯಾತ್ಮ. ಊಟಕ್ಕೆ ಕುಳಿತುಕೊಳ್ಳ ಬೇಕಾದ ಸ್ಥಳವನ್ನು ವೀರಿನೇ ಕ್ಲೀನ್ ಮಾಡಿದ ಅಂತಾ ಪ್ರತ್ಯೇಕವಾಗಿ ಹೇಳಬೇಕಿಲ್ಲ ಅನ್ಸುತ್ತೆ. ಬಿಟ್ಟಿದ್ರೆ ನಮ್ಮ ಪಾಲಿಂದೂ ಖಾಲಿ ಮಾಡುತ್ತಿದ್ದ.

ನಮಗೆ ಅರೆಬೆಟ್ಟ ಸ್ಟೇಷನ್‌ನಲ್ಲಿ ಸಿಕ್ಕಿದ ಮಾರ್ಗದರ್ಶಿಯ ಇಲ್ಲೂ ಆಯಿತು. ಪುಣ್ಯಾತ್ಮ ಬೆಳಗ್ಗೆ 8:45 ಗೆ ಅಲ್ಲಿಂದ ಹೊರಟವನು ಇಲ್ಲಿಗೆ 11: 15 ಗೆ ತಲುಪಿದ್ದ. ಸುಮಾರು 6 ರಿಂದ 7 ಕಿಮೀ ಸರಾಸರಿಯಲ್ಲಿ ಬಂದಿದ್ದ ಅಂದ್ರೆ ನಿಜಕ್ಕೂ ಗ್ರೇಟ್. ಮುಂದಿನ ಹಾದಿಯ ವಿವರವನ್ನು ಆತನಿಂದ ಪಡೆದು. ನಮ್ಮ ಪಾತ್ರೆ ಪಗಡುಗಳನ್ನು ತೊಳೆದು ಬಳೆದು ಹೊರಟಾಗ ಗಂಟೆ 11: 45. ಸ್ವಲ್ಪ ಹೆಚ್ಚು ಹೊತ್ತೇ ಇಲ್ಲಿ ನಿಂತ್ತಿದ್ದೆವು ಅನಿಸಿತು.

ಅಲ್ಲಿಂದ ಹೊರಟು ಸ್ವಲ್ಪ ಹೆಜ್ಜೆ ಇಡುವಷ್ಟರಲ್ಲೇ 'ಎಡಕುಮಾರಿ' ಸ್ಟೇಷನ್‌ಮಾಸ್ಟರ್ ಹೇಳುತ್ತಿದ್ದ ಟ್ರಾಲಿಯ ದರ್ಶನವಾಯಿತು. ಅದನ್ನು ನೋಡಿ ಅಂದುಕೊಂಡೆವು. ಇದನ್ನು ನಂಬಿಕೊಂಡಿದ್ದರೆ ನಾವು ಇನ್ನು ಎರಡು ದಿನ ಆಗುತ್ತಿತ್ತು, ನಮ್ಮ ಪಯಣ ಮುಗಿಸುವ ಹೊತ್ತಿಗೆ ಅಂತಾ.

ಕ್ಷಮಿಸಿ ಮಾರಾಯ್ರೆ... ಇನ್ನೊಂದು ಪ್ರಮುಖ ವಿಚಾರ ಹೇಳೋಕೆ ಮರೆತೇ ಬಿಟ್ಟೆ. ಮೊಬೈಲ್ ಫೋನ್ ಉಳ್ಳವರಿಗೇ ಇಲ್ಲಿದೆ ಸೂಚನೆ. ಎಡಕುಮಾರಿ ಸ್ಟೇಷನ್‌ನಲ್ಲಿ ಬಿಟ್ಟರೆ ನಂತರ ಈ ಸ್ಟೇಷನ್ ನಲ್ಲಿ ನಿಮಗೆ ಪೂರ್ತಿ ಸಿಗ್ನಲ್ ಕ್ಯಾಚ್ ಆಗುತ್ತೆ. ಇದು ಬಿಎಸ್ಸೆನ್ನೆಲ್ ಸಿಮ್ ಧಾರರಿಗೆ ಮಾತ್ರ. ಉಳಿದವರು ಭದ್ರವಾಗಿ ಬ್ಯಾಗ್‌ನಲ್ಲಿ ಇಡುವುದು ಉತ್ತಮ. ಬೇಕಾದಾಗ ಟಾರ್ಚ್‌ನಂತೆ, ಅಲಾರಂ ಆಗಿ ಅಷ್ಟೇ ಉಪಯುಕ್ತ. ಬಿಎಸ್ಸೆನ್ನೆಲ್ ಬಿಟ್ಟರೆ ಬೇರೆ ಯಾವ ಸಿಗ್ನಲ್ ಸಿಗೋಲ್ಲ.

ಇಲ್ಲಿಂದ ಮುಂದೆ ಸುಲಭದ ಹಾದಿ ನಾವು ಇನ್ನು ಕ್ರಮಿಸಬೇಕಾಗಿದ್ದು 5-6 ಟನೆಲ್ ಗಳು ಹಾಗೂ ಹೆಚ್ಚುಕಮ್ಮಿ ಅಷ್ಟೇ ಬ್ರಿಡ್ಜ್‌ಗಳನ್ನು. ಟನೆಲ್ 2 ಕ್ಕೂ ಮೊದಲು ಸಿಗುವ ಸುಂದರ ಜಲಪಾತವನ್ನು ಮರೆತರೆ ಹೇಗೆ. ಟನೆಲ್‌ನ ಮಧ್ಯ ಭಾಗದಲ್ಲಿ ಎಡಕ್ಕೆ ಜಲಪಾತ ನೋಡಲು ಜಾಗ ಇದೆ. ಅಬ್ಬಾ ...ಅದರ ರಭಸ. ನಮ್ಮಲ್ಲಿ ಚರ್ಚೆ ನಡೆದಿದ್ದು ಇದನ್ನು ವಿದ್ಯುತ್ ಉತ್ಪಾದನೆಗೆ ಬಳಸಲು ಸಾಧ್ಯವೇ. ಡ್ಯಾಂ ಮಾಡಬಹುದಾ ಹೇಗೆ ಅಂತಾ?

ಹುಚ್ಚು ಆಲೋಚನೆ ಹೆಚ್ಚು ಹೊತ್ತು ಎಡೆಗೊಡದೆ ಒಂದು ಸಣ್ಣ ಫೋಟೋ ಸೆಷನ್ ಮುಗಿಸಿ ಮುನ್ನೆಡೆದೆವು. ಟನೆಲ್ ರ ನಂತರ ಸಿಗುವ ಬ್ರಿಡ್ಜ್ ನ ಕೆಳಗಿನ ಹಾದಿಯಲ್ಲಿ ಸಾಗಿದರೆ 'ಮಾರೆನಹಳ್ಳಿ' ಯನ್ನು ತಲುಪಲು ವಿಸ್ತಾರವಾದ ದಾರಿಯಿತ್ತು.

ಇಲ್ಲಿಂದ ಮುಂದೆ ಬೇಕಾದರೆ ಹಳಿಗಳ ಮೇಲೆ ಸಾಗಿ ಇಲ್ಲಿಂದ ಸುಮಾರು 6-8 ಕಿಮೀ ನಲ್ಲಿ ಸಿಗುವ 'ದೋಣಿಗಾಲ್' ಸ್ಟೇಷನ್ ನಲ್ಲಿ ನಿಮ್ಮ ಪಯಣವನ್ನು ನಿಲ್ಲಿಸಿ, ನಂತರ ಬಸ್‌ನ ಕಡೆ ಮುಖ ಮಾಡಬಹುದು. ಆದ್ರೆ ನಿಮಗೆ ಹೆಚ್ಚಿನ ಲಾಭ ಎನೂ ಇಲ್ಲ ಇದರಿಂದ ಇನ್ನು ಒಂದು ಟನೆಲ್ ಹಾಗೂ 2-3 ಬ್ರಿಡ್ಜ್ ಸಿಗುತ್ತೇ ಅಷ್ಟೇ.

ರಾಷ್ಟ್ರೀಯ ಹೆದ್ದಾರಿ 4 ರಲ್ಲಿರುವ ಮಾರೇನ ಹಳ್ಳಿ ತಲುಪಲು ಏರು ತಗ್ಗಿನ ಕಚ್ಚಾ ರಸ್ತೆಯಲ್ಲಿ 3-4 ಕಿಮೀ ಕ್ರಮಿಸಬೇಕಾಯಿತು. ಇಲ್ಲಿವರೆಗೂ ಮುನ್ನಡೆಯ ನಡಿಗೆದಾರನಾದ ವರ್ಲಿನ್ ಮುಂದೆ ಸಾಗಿದ್ದ. ನಾನು ಹಾಗೂ ಹಿಂಪಡೆಯ ಶಿವ ಇಬ್ಬರೂ ಹಿಂದೆ ಉಳಿದೆವು. ಉಳಿದ ಮೂವರು 'ಸ್ಪಿರಿಟ್' ಬಂದವರಂತೆ ಮುಂದೆ ಸಾಗಿ ಟಾರ್ ರಸ್ತೆ ಕಂಡಿದ್ದರು.


ಶಿವನ ಬಳಿ ಇನ್ನೂ ಕೆಮರಾ ಇದ್ದಿದ್ದರಿಂದ ಲೇಟ್ ಅನ್ನೊದು ಇನ್ನೂ ಲೇಟ್ ಆಯಿತು. ಶಿವನಿಗೆ ಎರಡು ದಿನದಿಂದ ಸೇಬನ್ನು ನೀಡದೆ ವೀರಿ ಸತಾಯಿಸಿದ್ದ. ಕಡೆಗೆ ನಮ್ಮ ಪಯಣ ಮುಗಿದ ನಂತರ ಕೊಟ್ಟ. ಬೆಂಗಳೂರಿನ ಬಸ್‌ನಲ್ಲಿ ನಿಂತು ಪಯಣಿಸಲು ಪ್ರಾರಂಭಿಸಿದಾಗ ಗಂಟೆ 1: 30 ಆಗಿತ್ತು.

ಬಸ್‌ನಲ್ಲಿ `ವೀರಿ' ನಿದ್ದೆಯ ವೀಡಿಯೋ ಚಿತ್ರಣ, ನನ್ನ ಮೊಬೈಲ್‌ಗೆ ಜೀವ ಬಂದಿದ್ದು, ಬೆಂಗಳೂರು ತಲುಪುವ ಮೊದಲು ನಾನಾ ಕಡೆ ಕೆಟ್ಟು ನಿಂತ ಕೆಎಸ್ಸಾರ್‍ಟಿಸಿ ಬಸ್‌ಗಳ ದೃಶ್ಯ. ಆ ಬಸ್‌ಗಳಿಂದ ನಮ್ಮ ಬಸ್‌ಗೆ ಏರುತ್ತಿದ್ದ ಜನ. ನಮ್ಮ ಆರ್ಡಿನರಿ ಬಸ್‌ನಲ್ಲಿದ್ದ ಟಿವಿ. ಅದರಲ್ಲಿ ಶುರುವಾದ `ನಲ್ಲ' ಚಿತ್ರ.. ಇಲ್ಲ ಬಿಡಿ ಶುರುವಾಗಲೇ ಇಲ್ಲ . ಕಂಡೆಕ್ಟರ್ ಪಾಪ. `ಪ್ಲೇ' ಒತ್ತಿ ಒತ್ತಿ ಸುಸ್ತಾಗಿದ್ದು.

ಸೋಮನಿಗೆ ಐದು ರೂಪಾಯಿ ಕಾಯಿನ್ ಕೊಟ್ಟ ಹುಡುಗಿ. ವೀರಿ ತಂದು ಕೊಟ್ಟ ಉರಿಗಾರದ ಬೇಲ್ ಪುರಿ. ಕಡೆಗೆ ಇಳಿಯುವ ಮೊದಲು ಬರ್ಮುಡಾ ಶಾರ್ಟ್ಸ್(ಸಿಂಪ್ಲಿ ಸೇಯಿಂಗ್ ಚಡ್ಡಿ) ಯಿಂದ ಒದ್ದೆ ಪ್ಯಾಂಟ್ ಅನ್ನು ಬಸ್‌ನಲ್ಲೇ ಬದಲಾಯಿಸಿದ್ದು.. ಕೊನೆಗೆ ಮನೆಯ ರಸ್ತೆಯಲ್ಲಿ ನಡೆಯುವಾಗಲೂ ಕಾಲು ಹಳಿಗಳ ಮೇಲೆ ನಡೆದಂತೆ ವರ್ತಿಸತೊಡಗಿದ್ದು.

ಇಷ್ಟು ಉದ್ದದ ಕಥನ ಯಾಕೆ ಬರೆದೆ ಅಂತಾ ಕೇಳಬಹುದು. ನಮ್ಮ ಸಂತೋಷವನ್ನು ಚೂರು ಪಾರು ಮಾಡಿ ಹಂಚಿಕೊಳ್ಳುವುದಕ್ಕಿಂತ ಇಡಿಯಾಗಿ ನಿಮಗೆ ನೀಡಿದರೆ ಚೆನ್ನ ಅನ್ನಿಸಿತು. ಅಂತೂ ಚುಟುಕಾಗಿ(ನಿಜವಾಗಲೂ, ನಗಬೇಡಿ ಮತ್ತೆ) ಪ್ರವಾಸ ಕಥನವನ್ನು ಮುಗಿಸುತ್ತಿದ್ದೇನೆ.. ಅಥವಾ ಮುಂದಿನ ಕಥನಕ್ಕೆ ಮುನ್ನುಡಿ ಅಂತಾ ತಿಳಿದುಕೊಳ್ಳಿ...
-ಮಲೆನಾಡಿಗ
ಚಿತ್ರಗಳು : ಸೋಮಶೇಖರ, ವರ್ಲಿನ್, ಮಹೇಶ್ ಮಲ್ನಾಡ್, ಶಿವ

Friday 23 December 2011

ಹೀಗೊಂದು ಆರೋಹಣ... ಜೇನುಕಲ್ಲು ಗುಡ್ಡ - ಎತ್ತಿನ ಭುಜ ಚಾರಣ...-Jenkal Gudda-Ettina Bhuja Trek-Mudigere



ವರುಷವೊಂದು ಅಸ್ತಮಿಸುವ ವೇಳೆಯಲ್ಲಿ ಚಾರಣಕ್ಕೆ ಸಿದ್ಧವಾಗಿ ಬಸ್ ನಿಲ್ದಾಣದಲ್ಲಿ ನಿಂತ ನಮ್ಮ ಗುಂಪು ಹೊಸ ವರುಷದ ಹೋರಾಟಕ್ಕೆ ಸನ್ನದ್ಧವಾದಂತೆ ತೋರುತ್ತಿತ್ತು. ರವಿ ಮತ್ತು ಸುಂಡಿಯನ್ನು ಬಿಟ್ಟರೆ ಉಳಿದ ಏಳು ಜನರ ಪರಿಚಯ ಕೂಡ ನನಗಿರಲಿಲ್ಲ.

ಶಾಸ್ತ್ರಾಚಾರದಂತೆ ಹೆಸರುಗಳು ವಿನಿಮಯವಾದವು, ಮರುಕ್ಷಣದಲ್ಲಿ ಮರೆತು ಕೂಡ ಹೋದವು! ಎರಡು ದಿನಗಳ ಹಾದಿಯಲ್ಲಿ ಮನದೊಳಗೆ ಗಟ್ಟಿಯಾಗುತ್ತವೆ ಬಿಡು ಎಂದು ನಾನು ಸುಮ್ಮನಾದೆ. ಗೋಪಿ ಸಾಕಷ್ಟು ಪೂರ್ವ ತಯಾರಿ ನಡೆಸಿದ್ದರೆಂದು ತೋರುತ್ತದೆ, ಎರಡು ದಿನಗಳಿಗೆ ಸಾಕಾಗುವಷ್ಟು ಹಣ್ಣುಗಳು, ಒಣ ಹಣ್ಣುಗಳು ನಮ್ಮೆಲ್ಲರ ಬೆನ್ನಿಗೇರಿದವು.

ಒಂಭತ್ತುವರೆಯ ಬಸ್ಸನ್ನು ತಪ್ಪಾಗಿ ಹತ್ತಿ ಇಳಿದ ನಂತರ, ಹತ್ತು ಗಂಟೆಯ ಕರ್ನಾಟಕ ಸಾರಿಗೆ ಬಸ್ಸಿನ ಕೊನೆಯ ಆಸನಗಳು ನಮ್ಮ ಸೇವೆಗೆ ಸಿದ್ಧವಾಗಿದ್ದವು! ಹಳ್ಳ ಕೊಳ್ಳಗಳ ಪರಿವೆಯಿಲ್ಲದೆ ಮುನ್ನುಗ್ಗುತ್ತಿದ್ದ ಬಸ್ಸು ನಮ್ಮನ್ನು ಮೂಡಿಗೆರೆಯಲ್ಲಿ ಎಸೆದದ್ದಷ್ಟೇ ಗೊತ್ತು. ಆವಾಗಲಷ್ಟೇ ಎದ್ದೇಳುತ್ತಿದ್ದ ಮೂಡಿಗೆರೆ ನಮ್ಮ ಹೊಟ್ಟೆಗೆ ಮೋಸ ಮಾಡಲಿಲ್ಲ. ಟೀ, ಇಡ್ಲಿ, ಕಾಫಿಗಳ ಸಮಾರಾಧನೆಯ ವೇಳೆಗೆ ಚಾರಣದ ಜನಪ್ರಿಯ ಪಾತ್ರ ಫರ್ನಾಂಡಿಸ್(ಕ್ರಿಶ್ಚಿಯನ್)...ಜೂಲಿಯನ್ ಫರ್ನಾಂಡೀಸ್(ಕ್ರಿಶ್ಚಿಯನ್) ಅವರ ಪ್ರವೇಶವೂ ಆಯಿತು.

ಮುಂದಿನ ಒಂದು ಗಂಟೆಯ ಫರ್ನಾಂಡಿಸರೊಂದಿಗಿನ ಟಾಟಾ ಸುಮೋ ಪಯಣದ ಬಗ್ಗೆ ಒಂದು ಪ್ರತ್ಯೇಕ ಲೇಖನವನ್ನೇ ಬರೆಯಬಹುದು :-D ನೀವೇನಾದರೂ ಮೂಡಿಗೆರೆಗೆ ಹೋದರೆ ಫರ್ನಾಂಡಿಸ್ ಅವರ ಸುಮೋದಲ್ಲಿ ಕುಳಿತುಕೊಳ್ಳಲೇ ಬೇಕು. ಮೂಡಿಗೆರೆ ನಮಗೆಲ್ಲ ಯಾವುದೋ ಊರೆನಿಸದೆ ಆಪ್ತ ಎನಿಸುವುದು ತೇಜಸ್ವಿಯವರ ಪುಸ್ತಕಗಳಿಂದ. ತೇಜಸ್ವಿಯವರನ್ನು ಬಿಟ್ಟರೆ ನನಗೀಗ ಮೂಡಿಗೆರೆ ಎಂದರೆ ನೆನಪಾಗುವುದು ಫರ್ನಾಂಡಿಸ್ ಮಾತ್ರ!

ಫರ್ನಾಂಡಿಸ್ ಅವರು ನಮ್ಮನ್ನೆಲ್ಲ ಭೈರವೇಶ್ವರ ದೇವಸ್ಥಾನದ ಬಳಿ ಇಳಿಸಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿ ಹೊರಟು ಹೋದರು. ಅವರ ಮಾತುಗಳು ಮಾತ್ರ ಚಾರಣದುದ್ದಕ್ಕೂ ಚರ್ಚೆಯಲ್ಲಿದ್ದವು. ಇದ್ದುದರಲ್ಲೇ ಸ್ವಚ್ಛತೆಯ ಬಗ್ಗೆ ಕಾಳಜಿಯಿದ್ದವರು ಹಲ್ಲುಜ್ಜುವುದರಲ್ಲಿ ನಿರತವಾಗಿದ್ದರೆ, ನಾವು ಗುಡಾರಗಳಿದ್ದ ಚೀಲಗಳನ್ನು ನಮ್ಮ ಬ್ಯಾಗ್ ಗಳಿಗೆ ಕಟ್ಟುತ್ತಿದ್ದೆವು.

ಮಹೇಶ ಮತ್ತು ಅಶ್ವಲ್ ನಕಾಶೆ ಓದುವುದರಲ್ಲಿ ನಿರತವಾಗಿದ್ದರು. ಅಲ್ಲಿಂದ ಒಂಭತ್ತು ಗುಡ್ಡಕ್ಕೆ ಹೋಗುವ ದಾರಿಯ ಒಗಟನ್ನು ಬಿಡಿಸಲು ಅವರು ಪ್ರಯತ್ನಿಸುತ್ತಿರುವಾಗಲೇ ನಮ್ಮ ಮಾರ್ಗದರ್ಶಕರಾದ ಮಂಜು ಮತ್ತು ಅಭಿ ಅವರ ಪ್ರವೇಶವಾಯಿತು. ಅತ್ತ ದೇವಸ್ಥಾನದ ಭಟ್ಟರು ಶೃತಿ, ಲತಾ ಮತ್ತು ಪುಟ್ಟಿ ಅವರಿಗೆ ಬೆಂಗಳೂರಿನಿಂದ ಬಂದ ಹುಡುಗರು ಮಾರ್ಗದರ್ಶಕರಿಲ್ಲದೆ ಕಾಡಿಗೆ ಹೋಗಿ ದಾರಿ ತಪ್ಪಿದ ಕಥೆ ಹೇಳುತ್ತಿದ್ದರು.

ಕಥೆಯ ಮೊದಲ ತಿರುವು : ಚಾರಣದ ಮೊದಲ ತಿರುವಾಗಿ ಮಂಜು ಮತ್ತು ಅಭಿ, ಒಂಭತ್ತು ಗುಡ್ಡಕ್ಕೆ ಇಲ್ಲಿಂದ ಹೋಗುವುದು ಸಾಧ್ಯವೇ ಇಲ್ಲವೆಂದೂ, ಜೇನುಕಲ್ಲು ಗುಡ್ಡಕ್ಕೆ ಮಾತ್ರ ನಮ್ಮನ್ನು ಕರೆದೊಯ್ಯಬಹುದೆಂದೂ ಪಟ್ಟು ಹಿಡಿದರು. ಅವರು ಜೇನುಕಲ್ಲು ಗುಡ್ಡ ಬರೀ ಮೂರು ಕಿಲೋ ಮೀಟರ್ ಇದೆ ಎಂದಾಗ ನಾನು ಮತ್ತು ರವಿ "ಬೆಂಗಳೂರಿಂದ ಇಲ್ಲಿಗೆ ಬಂದು ಬರಿ ಮೂರು ಕಿಲೋ ಮೀಟರ್ ಚಾರಣ ಮಾಡಬೇಕಾ?" ಎಂದು ಗೊಣಗುತ್ತಾ ಹೊರಟೆವು. ಆದರೆ ನಮಗೆ ಮುಂದಿನ ನಿಜವಾದ ಸವಾಲುಗಳ ಅರಿವಿರಲಿಲ್ಲ!

ಹೊಸ ವರ್ಷದ ಮೊದಲ ಸೂರ್ಯ ರಶ್ಮಿಗಳು ನೆಲವನ್ನು ತಾಕುತ್ತಿರುವಂತೆ, ಆಕಾಶವನ್ನು ಚುಂಬಿಸುವ ಮಲೆನಾಡ ಶೃಂಗಗಳ ತಪ್ಪಲಲ್ಲಿ ನಮ್ಮ ಚಾರಣ ಪ್ರಾರಂಭವಾಯಿತು. ತಮಾಷೆಯ ಮಾತುಗಳು, ನಗೆಯ ಅಲೆಗಳು ಪರ್ವತಗಳ ಮಡಿಲಲ್ಲಿ ಪ್ರತಿಧ್ವನಿಗಯ್ಯುತ್ತಿರಲು ನಮ್ಮ ಪಯಣ ನಿಧಾನವಾಗಿ ಸಾಗುತ್ತಿತ್ತು. ಜೌಗು ಪ್ರದೇಶವೊಂದನ್ನು ದಾಟುವಾಗ ಹೂಳಿನಲ್ಲಿ ಹೂತುಹೋಗಿ ನಮ್ಮ ಬೂಟುಗಳಿಗೆಲ್ಲ ಕೆಸರಿನ ಅಭಿಷೇಕವೂ ಆಯಿತು. ಒದ್ದೆಯಾದ ಕಾಲುಚೀಲ ಬೂಟುಗಳ ಭಾರದೊಂದಿಗೆ ಭಾರವಾದ ಹೆಜ್ಜೆಗಳನ್ನಿಡುತ್ತಾ ಮೇಲೇರಲು ಪ್ರಾರಂಭಿಸಿದೆವು.

ನನ್ನ ಪ್ರೀತಿಯ, ಅಚ್ಚ ಬಿಳಿಯಾದ ಬೂಟು ತಿರುಗಿ ಬರಲಾಗದ ಬಣ್ಣಕ್ಕೆ ಬದಲಾಗಿತ್ತು. ಕಿತ್ತಳೆ, ಮೋಸಂಬಿ, ಖರ್ಜೂರಗಳ ಸೇವೆ ಧಾರಾಳವಾಗಿ ಸಾಗುತ್ತಿರಲು, ನಾವು ಜೇನುಕಲ್ಲು ಗುಡ್ಡದ ಬುಡವನ್ನು ತಲುಪಿದ್ದೆವು. ಅಷ್ಟೊತ್ತಿಗಾಗಲೇ ಎಲ್ಲರಿಗೂ ಸುಸ್ತು ಹೊಡೆದಿತ್ತು. ಆವಾಗಲೇ ನಮಗೆ ಮೂರು ಕಿಲೋ ಮೀಟರ್ ಬಗ್ಗೆ ಸಂಶಯ ಶುರುವಾಗಿದ್ದು :) ನಾನು ಅಭಿಯನ್ನು ಕೇಳಿದರೆ ಮೂರು ಕಿಲೋ ಮೀಟರ್ ಸುಳ್ಳನ್ನು ಹೇಳಿಲ್ಲವೆಂದರೆ, ಗುಡ್ಡದ ಎತ್ತರವನ್ನು ನೋಡಿ ಬೆಂಗಳೂರಿನಿಂದ ಬಂದವರು ಚಾರಣವನ್ನು ಪ್ರಾರಂಭಿಸುವುದೇ ಇಲ್ಲವೆಂದ!

ಅಶ್ವಲ್, ನಾನು ಮತ್ತು ಮಹೇಶ ಜೇನುಕಲ್ಲು ಗುಡ್ಡದ ತುದಿಯೆಡೆಗೆ ಹತ್ತಲು ಪ್ರಾರಂಭಿಸಿದೆವು. ಆವಾಗಲೇ ನಮಗೆ ಅದೆಷ್ಟು ಕಡಿದಾದ ಪರ್ವತ ಎಂಬ ಅರಿವಾಗಿದ್ದು. ಕೈ ಕಾಲುಗಳನ್ನೆಲ್ಲ ಬಳಸಿ ತುದಿಯನ್ನು ತಲುಪಿದಾಗ ಪ್ರಪಂಚವನ್ನೇ ಗೆದ್ದಂಥ ಭಾವ! ಒಬ್ಬೊಬ್ಬರಾಗಿ ತುದಿಯನ್ನು ತಲುಪಿ ಕೇಕೆ ಹಾಕಿದ್ದಾಯಿತು.

ಎಲ್ಲಿ ನೋಡಿದರಲ್ಲಿ ಹಸಿರು, ಮಂಜನ್ನು ಹೊತ್ತು ತರುವ ತಂಗಾಳಿ, ಮರು ಕ್ಷಣದಲ್ಲೇ ಸೂರ್ಯನ ಉರಿ ಬಿಸಿಲು. ಯಾವುದೋ ಬೇರೆಯೇ ಲೋಕದಲ್ಲಿರುವಂಥ ಅನುಭವ. ಪ್ರಕೃತಿಯ ಸೌಂದರ್ಯದ ಮುಂದೆ ಮನಸ್ಸು ಮೂಕವಾಗುತ್ತದೆ. ಅಶ್ವಲ್ ಮತ್ತು ಮಹೇಶ ನಕಾಶೆ ತೆರೆದು ನಾವೆಲ್ಲಿದ್ದೇವೆ ಎಂದು ಹುಡುಕುವ ವ್ಯರ್ಥ ಪ್ರಯತ್ನದಲ್ಲಿದ್ದರೆ, ನಾನು ನಿಸರ್ಗ ಸಿರಿಯ ಭವ್ಯತೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವ ವ್ಯರ್ಥ ಪ್ರಯತ್ನದಲ್ಲಿದ್ದೆ.


ಎರಡನೇ ತಿರುವು : ಸ್ಚಲ್ಪ ವಿಶ್ರಾಂತಿ ಪಡೆದು, ವಾಪಸ್ಸು ಇಳಿಯೋಣವೆಂದು ಕುಳಿತಲ್ಲಿಂದ ಎದ್ದೆವು. ಮಂಜು "ಇಲ್ಲಿಂದ ಕೆಳಗಿಳಿಯಬೇಕು" ಎಂದು ತೋರಿಸಿದಾಗ, ಎಲ್ಲರ ಕೈ ಕಾಲುಗಳು ನಡುಗುತ್ತಿದ್ದವು! ಆಳವಾದ ಪ್ರಪಾತಕ್ಕೆ ಮುಖ ಮಾಡಿ ನಿಂತಿದ್ದ ಜೇನುಕಲ್ಲು ಗುಡ್ಡದ ಬಹುತೇಕ ಲಂಬವಾದ ಮೇಲ್ಮೈ ಮೇಲಿಂದ ಕೆಳಗಿಳಿಯಬೇಕಿತ್ತು, ಅಲ್ಲಿ ಕಾಲು ದಾರಿ ಕೂಡ ಇರಲಿಲ್ಲ!

ನಮ್ಮೆಲ್ಲರಿಗೂ ನಾವೆಂಥ ಹುಚ್ಚುತನಕ್ಕೆ ಕೈ ಹಾಕಿದ್ದೇವೆ ಎಂಬುದರ ಅರಿವಾಗಿ ಹೋಗಿತ್ತು. ಮೇಲೆ ಹತ್ತಿದ ಮೇಲೆ ಕೆಳಗೆ ಇಳಿಯಲೇ ಬೇಕು ಎಂಬುವುದು ಜಗದ ನಿಯಮ :) ತೆವಳುತ್ತ, ಕುಂಟುತ್ತ ಇಳಿಯಲು ಪ್ರಾರಂಭಿಸಿದೆವು. 'ಕಾಲಿಟ್ಟಲ್ಲಿ ಕಾಲುದಾರಿ' ಎಂದೆನ್ನುತ್ತ ಇಳಿಯುತ್ತಿದ್ದರೆ, ಕೆಳಗೆ ಮುಟ್ಟುತ್ತೇವೆಂಬ ಭರವಸೆ ಕೂಡ ಇರಲಿಲ್ಲ. ಕಾಲು ಜಾರಿ ಯಾರ್ ಯಾರು ಎಷ್ಟು ಸಾರಿ ಬಿದ್ದರು ಎಂಬ ಲೆಕ್ಕವಿಡುವುದು ಸಾಧ್ಯವಿರಲಿಲ್ಲ.

ಪುಟ್ಟಿ, ಮಂಜು ಮತ್ತು ಉಪ್ಪಿಯರೊಂದಿಗೆ ಎಲ್ಲರಿಗಿಂತ ಮುಂದೆ ಇಳಿಯುತ್ತಾ, ಅಲ್ಲಿಂದ ಮನುಷ್ಯ ಮಾತ್ರರು ಇಳಿಯಬಹುದು ಎಂಬ ಭರವಸೆ ಹುಟ್ಟಿಸುತ್ತಿದ್ದರು :) ಆವರಿಸಿಕೊಂಡಿದ್ದ ಮಂಜು ಒಮ್ಮೆ ನಮ್ಮ  ದಾರಿ ತಪ್ಪಿಸಿ ಪ್ರಪಾತದ ಅಂಚಿನಲ್ಲಿ ತಂದು ನಿಲ್ಲಿಸಿತ್ತು! ಮತ್ತೆ ಅಲ್ಲಿಂದ ಹಿಂತಿರುಗಿ ದೀಪದ ಗುಡ್ಡದ ಕಡೆಗೆ ಇಳಿಯ ತೊಡಗಿದೆವು. ಮಂಜು ಮತ್ತು ಅಭಿ ಅವರೇ ದಾರಿಯನ್ನು ಹುಡುಕ ತೊಡಗಿದಾಗ, ಆವಾಗಲೇ ನಡೆದೂ ನಡೆದೂ ಸುಸ್ತಾಗಿದ್ದ ಗೋಪಿ ಚೆನ್ನಾಗಿ ಅವರನ್ನೊಮ್ಮೆ ಬಯ್ದಿದ್ದೂ ಆಯಿತು.

ಎಲ್ಲಿ ಕಾಲು ಎಡವಿತೋ, ಎಲ್ಲಿ ಕೈ ತರಚಿತೋ ಯಾರಿಗೂ ಪರಿವೆಯಿರಲಿಲ್ಲ. ಹೊಟ್ಟೆ ಬೇರೆ ತಾಳ ಹಾಕುತ್ತಿತ್ತು. ಅಷ್ಟೊತ್ತಿಗೆ ದೂರದಲ್ಲೆಲ್ಲೋ ಕೆಳಗಡೆ ಓಡಾಡುವ ಜನ ಕಾಣಿಸಿದರು. ನಮ್ಮ ಊಟ ಅಲ್ಲಿದೆ ಎಂದು ಗೊತ್ತಾದದ್ದೆ ಹಸಿವು ಕಾಲನ್ನು ಆ ಕಡೆ ಎಳೆಯ ತೊಡಗಿತು. ಅಂತೂ ಏಳುತ್ತ ಬೀಳುತ್ತ ಊಟವಿರುವ ಜಾಗ ತಲುಪಿದ್ದಾಯಿತು.

ಹಸಿದ ಹೊಟ್ಟೆಗೆ ಸ್ವಾದಿಷ್ಟ ಚಿತ್ರಾನ್ನ, ಮೊಸರನ್ನ, ಉಪ್ಪಿನಕಾಯಿಗಳು ಬಿದ್ದಮೇಲೆ ಹೊಸ ಹುಟ್ಟು ಪಡೆದಂತೆ :) ಮೂರು ಕಿಲೋ ಮೀಟರ್ ಎಂದು ಪ್ರಾರಂಭವಾದ ಚಾರಣ ಸುಮಾರು ಇಪ್ಪತ್ತು ಕಿಲೋ ಮೀಟರ್ ಗಳಿಗಿಂತ ಹೆಚ್ಚು ಉದ್ದವಾಗಿ ಹೋಗಿತ್ತು!

ಅಲ್ಲಿಂದ ಗುಂಡ್ಯದ ಕಡೆಗೆ ಹೋಗಬೇಕಿದ್ದ ನಮ್ಮ ಉದ್ದೇಶವನ್ನು ಆನೆ ಹಾವಳಿ ವಾಪಸ್ಸು ಭೈರವೇಶ್ವರ ದೇವಸ್ಥಾನದ ಕಡೆಗೆ ಹೆಜ್ಜೆ ಹಾಕುವಂತೆ ಮಾಡಿತು. ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ನಮ್ಮ ಗುಡಾರಗಳನ್ನು ನಿಲ್ಲಿಸಲು ತೊಡಗಿದಾಗ ಹೊತ್ತು ಕಂತುತ್ತಿತ್ತು, ಇನ್ನೊಂದೆಡೆ ಬಿಸಿ ಬಿಸಿ ಕಾಫಿ ತಯಾರಾಗಿತ್ತು. ಶಿಬಿರದ ಮಧ್ಯೆ ಬೆಂಕಿ ಹತ್ತಿಸುವ ಹೊತ್ತಿಗೆ ಊಟದ ಸಮಯ. ನಡುಗುವ ಛಳಿಯಲ್ಲಿ ಉರಿಯುವ ಬೆಂಕಿಯ ಮುಂದೆ ಕುಳಿತು ರುಚಿಕರವಾದ ಚಪಾತಿ, ಚಟ್ನಿ, ಚಿತ್ರಾನ್ನಗಳನ್ನು ಸವಿಯುವ ಸುಖದ ಮುಂದೆ ಉಳಿದೆಲ್ಲವೂ ಶೂನ್ಯವಾಗಿಬಿದುತ್ತದೆ.

ನಾನು ರವಿ ಮತ್ತು ಸುಂಡಿ ಒಂದು ಗುಡಾರ ಸೇರಿಕೊಂಡೆವು. ರವಿ ಮತ್ತು ಸುಂಡಿಯ ಶೃತಿ ಸೇರಿದ ಗೊರಕೆ ಕಾಡುಪ್ರಾಣಿಗಳಿಂದ ನಮ್ಮನ್ನು ಕಾವಲು ಕಾಯುತ್ತಿದ್ದರೆ ಉಪ್ಪಿಯ ಆಲಾರಾಂ ಸೂರ್ಯೋದಯವನ್ನು ನೋಡಲು ನಮ್ಮೆಲ್ಲರನ್ನೂ ಎಬ್ಬಿಸಿತು. ಇನ್ನೂ ಬಿಸಿಯಿದ್ದ ಉರಿಯನ್ನು ಇನ್ನೊಮ್ಮೆ ಹೊತ್ತಿಸಿ ಆ ಛಳಿಯಲ್ಲಿ ಅಶ್ವಲ್ ಮಾಡಿದ ಕಾಫಿಯನ್ನು ಕುಡಿಯುತ್ತಾ ಸೂರ್ಯೋದಯವನ್ನು ವೀಕ್ಷಿಸುವ ಸುಖವನ್ನು ವರ್ಣಿಸಲು ಸಾಧ್ಯವಿಲ್ಲ! ಬೆಟ್ಟ, ಮೋಡಗಳ ಮರೆಯಿಂದ ಎದ್ದು ಬರುವ ಸೂರ್ಯನ ಹೊಂಗಿರಣಗಳು ಮಂಜಿನಲ್ಲಿ ಕುತ್ತಿಗೆಯವರೆಗೂ ಹೂತು ಹೋದ ಶೃಂಗಗಳನ್ನು ಬೆಳಗುವ ಪ್ರಕೃತಿಯ ಸೊಬಗು ಕಣ್ಣಿಗೆ ಹಬ್ಬ.

ಸ್ವಲ್ಪ ಹೊತ್ತಿಗೇ ನಮ್ಮನ್ನು ಎತ್ತಿನ ಭುಜವನ್ನು ಹತ್ತುವ ದಾರಿಯವರೆಗೆ ಬಿಡಲು 'ಮರೆಯಲಾಗದ ಓಮ್ನಿ'ಯ ಆಗಮನವಾಯಿತು :) ಹತ್ತು ಜನ ಒಂದು ಓಮ್ನಿಯೊಳಗೆ ಉಪ್ಪಿನಕಾಯಿಯಂತೆ ಸೇರಿಕೊಂಡೆವು! ಕಡಿದಾದ ಏರು ರಸ್ತೆಯಲ್ಲಿ ಮೇಲೇರುತ್ತಿರುವಾಗ ಎದುರಿಗೆ ಬಂದ ದನದ ಹಿಂಡನ್ನು ನೋಡಿ ಡ್ರೈವರ್ ಬ್ರೇಕ್ ಹಾಕಿದ್ದಷ್ಟೇ ಗೊತ್ತು, ಓಮ್ನಿ ಹಿಂದೆ ಹೋಗಲು ತೊಡಗಿತು!

ಅದನ್ನು ಹೇಗೋ ಸಂಭಾಳಿಸಿದ ಡ್ರೈವರ್ ಬಲಗಡೆ ಇದ್ದ ಗುಡ್ಡದ ಬದಿಯ ಚಿಕ್ಕ ಕಾಲುವೆಯಲ್ಲಿ ನಿಲ್ಲಿಸುವುದರಲ್ಲಿ ಸಫಲನಾದ. ಎಡಗಡೆ ಹೋದಲ್ಲಿ ಗುಡ್ಡದ ಆಳಕ್ಕೆ ಓಮ್ನಿ ಉರುಳು ಸೇವೆ ಮಾಡಬೇಕಿತ್ತು ಎಂಬುದು ಇಳಿದ ಮೇಲೇ ನಮಗೆಲ್ಲ ಅರಿವಾಗಿದ್ದು! ಎಂಟೂ ಜನ ಹುಡುಗರು ಕೂಡಿ ಇದ್ದ ಬಿದ್ದ ಶಕ್ತಿಯನ್ನೆಲ್ಲ ಹಾಕಿ ಒಮ್ನಿಯನ್ನು ಬಿದ್ದಲ್ಲಿಂದ ರಸ್ತೆಗೆ ಎತ್ತಿದ್ದಾಯಿತು. ಹೆಚ್ಚಿಗೆ ಏನೂ ಅನಾಹುತವಾಗದೆ ಓಮ್ನಿ ಪುರಾಣ ತಮಾಷೆಯಲ್ಲೇ ಮುಕ್ತಾಯವಾದದ್ದು ನಮ್ಮ ಪುಣ್ಯ! ದೇವರ ದಯೆ :)

ಇನ್ನೊಂದು ಬಾರಿ ಗಡದ್ದಾಗಿ ಚಪಾತಿ, ಚಟ್ನಿ, ಚಟ್ನಿಪುಡಿಗಳ ಸಮಾರಾಧನೆಯಾಯಿತು. 'ಎತ್ತಿನ ಭುಜ' ಪರ್ವತವನ್ನು ಕತ್ತೆತ್ತಿ ನೋಡಿದ ಮೇಲೆ, ಹತ್ತಲು ಮನಸ್ಸು ಮಾಡಿದ್ದು ನಾವೈದೇ ಜನ. ನಾನು, ಮಹೇಶ, ಸುಂಡಿ, ಅಶ್ವಲ್ ಮತ್ತು ಲತಾ ದಾರಿ ತುಳಿಯ ತೊಡಗಿದೆವು. ಆರಂಭದ ಸ್ವಲ್ಪ ಭಾಗ ಕಾಡಿನೊಳಗೆ ಸಾಗುವ ದಾರಿ ನಮ್ಮನ್ನು ಕಡಿದಾಗಿರುವ ಎತ್ತಿನ ಭುಜದ ಶೃಂಗದ ಬುಡಕ್ಕೆ ತಂದು ನಿಲ್ಲಿಸುತ್ತದೆ. ಕತ್ತೆತ್ತಿ ನೋಡಿದರೆ ಹತ್ತುವುದು ಅಸಾಧ್ಯ ಎನಿಸುವ ಎತ್ತಿನ ಭುಜ, ಜೇನುಕಲ್ಲು ಗುಡ್ಡವನ್ನು ಹಿಂದಿನ ದಿನವಷ್ಟೇ ಹತ್ತಿಳಿದಿದ್ದ ನಮಗೆ ದೊಡ್ಡ ಸವಾಲೆನಿಸಲಿಲ್ಲ.

ಅಂದುಕೊಂಡದ್ದಕ್ಕಿಂತ ಬೇಗನೆ ತುದಿ ಮುಟ್ಟಿ ಎಲ್ಲೆಡೆಯೂ ಪ್ರತಿಧ್ವನಿಸುವಂತೆ ಕಿರುಚಿದ್ದಾಯಿತು. ಸ್ವಲ್ಪ ವಿಶ್ರಮಿಸಿ ವಾಪಸ್ಸು ಹೊರಟೆವು. ಹಿಂತಿರುಗಿ ದಾರಿ ಸವೆಸುತ್ತಾ ಉಪ್ಪಿಯ ಆಕ್ಸಿಡೆಂಟ್ ಕಥೆಗಳು... ಮಹೇಶನ ಫುಟ್ಬಾಲ್ ಪುರಾಣ... ಶಾಲೆ-ಕಾಲೇಜಿನ ದಿನಗಳು... ತೇಜಸ್ವಿಯವರ ಪುಸ್ತಕಗಳು ... ದಾರಿ ಖರ್ಚಿಗಾದವು. ವಾಪಸ್ಸು ತಲುಪುವ ಹೊತ್ತಿಗೆ, ಪಕ್ಕದಲ್ಲಿದ್ದ ದೇವಸ್ಥಾನದಲ್ಲಿ ಗಣ ಬಂದಿದ್ದನ್ನು ನೋಡಿ ಬಂದು ಕುಳಿತಿದ್ದ ಉಳಿದವರು ಸ್ವಾರಸ್ಯಕರ ಚರ್ಚೆ ಪ್ರಾರಂಭಿಸಿದ್ದರು. ಸ್ವಲ್ಪ ಹೊತ್ತು ತಮಾಷೆ, ನಗುಗಳು ಓಡಾಡಿದ ಮೇಲೆ, ಅಲ್ಲೇ ಇದ್ದ ಕೆರೆಯ ಪಕ್ಕದಲ್ಲಿ ಮ್ಯಾಗಿ, ನಿಂಬೆ ಮಿಶ್ರಿತ ಚಹ ಹಸಿವು ತಣಿಸಿದವು.

ಅಲ್ಲಿಂದ ವಾಪಸ್ಸು ಬಸ್ಸು ಸಿಗುವಲ್ಲಿಗೆ ನಡೆದು ಬಂದು, ಬಸ್ಸು ಹತ್ತಿ ಮೂಡಿಗೆರೆ ಸೇರುವ ಹೊತ್ತಿಗೆ ಸಂಜೆಯಾಗಿತ್ತು. ಅಲ್ಲಿ ವಿಚಾರಿಸಿದಾಗ ಬೆಂಗಳೂರಿಗೆ ನೇರವಾಗಿ ಬಸ್ಸು ಇಲ್ಲವೆಂದೂ, ಬೇಲೂರಿಗೋ ಇಲ್ಲ ಚಿಕ್ಕಮಗಳೂರಿಗೋ ಹೋಗಬೇಕೆಂದರು. ಅಲ್ಲಿಂದ ಚಿಕ್ಕಮಗಳೂರಿಗೆ ಬಂದು, ಟೌನ್ ಕ್ಯಾಂಟೀನ್ ನಲ್ಲಿ ಪ್ರಸಿದ್ಧವಾದ ದೋಸೆ ತಿಂದಿದ್ದಾಯಿತು.

ಗುಡಾರವೊಂದನ್ನು ರಿಕ್ಷಾದಲ್ಲೇ ಬಿಟ್ಟು ಬಂದು ಚಿಕ್ಕಮಗಳೂರನ್ನೆಲ್ಲ ಸುತ್ತಿದ್ದೂ ಆಯಿತು. ಬೆಂಗಳೂರನ್ನು ತಲುಪಲು ನಮ್ಮೆಲ್ಲರ ಪ್ರೀತಿಯ ಕರ್ನಾಟಕ ಸಾರಿಗೆ ಬಸ್ಸಿಗೆ ಕಾಯುತ್ತಿರುವಾಗ, ಪುಟ್ಟಿ, ಫೇಲಾಗುತ್ತಲೇ ಪಾಸಾದ ಹುಡುಗನ ಸ್ವಾರಸ್ಯಕರ ಕಥೆ ಹೇಳುತ್ತಿದ್ದಳು :) ಮರುದಿನ ಬೆಳಗಿನ ಜಾವ ಬಸ್ಸು ನಮ್ಮನ್ನು ಪ್ರಕೃತಿಯ ಮಡಿಲಿಂದ, ಬದುಕಿನ ಹೋರಾಟದ ರಣರಂಗವಾದ ಬೆಂಗಳೂರಿಗೆ ವಾಪಸ್ಸು ತಂದು ಎಸೆದಿತ್ತು.

ಚಾರಣ ಯಶಸ್ವಿಯಾಗಲು ಮೊದಲ ಕಾರಣ ನಮ್ಮ ಅದ್ಭುತ ತಂಡ. ಗೋಪಿ ಮತ್ತು ಮಹೇಶ ಚಾರಣಕ್ಕೆ ಮಾಡಿದ ಪೂರ್ವತಯಾರಿ ಮತ್ತು ಏರ್ಪಾಡುಗಳನ್ನು ನೆನೆಯಲೇ ಬೇಕು. ಎರಡು ದಿನ ಜೊತೆಯಲ್ಲಿ ಇಟ್ಟ ಹೆಜ್ಜೆ ನನಗೆ ಒಳ್ಳೆಯ ಗೆಳೆಯರನ್ನು ಒದಗಿಸುವುದರ ಜೊತೆಗೆ ಸುಂದರ ನೆನಪುಗಳನ್ನೂ ಉಳಿಸಿ ಹೋಯಿತು.

ಉಪ್ಪಿ ಮತ್ತು ಶೃತಿಯ ಬೆಕ್ಕಿನ ಜಗಳಗಳು...ಅದನ್ನು ಬಿಡಿಸಲು ಉಪ್ಪಿಯ ಕಾಲರ್ ಹಿಡಿದು ಎಳಕೊಂಡು ಹೋದ ಪುಟ್ಟಿ...ಬಾಕಿ ಇರುವ ಬಿರ್ಯಾನಿಗಾಗಿ ಶೃತಿಯೊಡನೆ ಜಗಳ ತೆಗೆದ ಅಶ್ವಲ್...ಮೂರ್ತಿ ಚಿಕ್ಕದಾದರೂ ಇದ್ದ ಬಿದ್ದ ಗುಡ್ದಗಳನ್ನೆಲ್ಲ ಹತ್ತಿಳಿದ ಲತಾ... ಕುಳಿತಲ್ಲೆಲ್ಲ ಗೊರಕೆ ಹೊಡೆದ ಸುಂಡಿ...ನಮ್ಮೆಲ್ಲರ ಮೆಚ್ಚಿನ ಮೂಡಿಗೆರೆ ಫರ್ನಾಂಡಿಸ್...ಇದ್ದ ಬಿದ್ದ ಸಾಮಾನುಗಳೆಲ್ಲವನ್ನು ಹೊತ್ತು ವಿರಾಗಿಯಂತೆ ಬೆಟ್ಟ ಹತ್ತುತ್ತಿದ್ದ ರವಿ... ನಡುಗುವ ಕಾಲುಗಳೊಡನೆ ಜೇನುಕಲ್ಲುಗುಡ್ಡವನ್ನು ಯಶಸ್ವಿಯಾಗಿ ಇಳಿದ ಪುಟ್ಟಿ...ನಮ್ಮೆಲ್ಲರಿಗೂ ಕುಟುಂಬದ ಮುಖ್ಯನಂತಿದ್ದ ಗೋಪಿ...ಕೊನೆಯವರೆಗೂ ನಕಾಶೆಯಲ್ಲಿ ತಪ್ಪಿದ ದಾರಿಯನ್ನು ಹುಡುಕುತ್ತಿದ್ದ ಮಹೇಶ ಮತ್ತು ಅಶ್ವಲ್...ಹೇಳುತ್ತ ಹೋದರೆ ಮುಗಿಯಲಾರದಷ್ಟು ಸಂತಸದ ಕ್ಷಣಗಳಿಗೆ ಸಾಕ್ಷಿಯಾದ ಈ ಚಾರಣ ಎಲ್ಲರಿಗೂ ಮನಸ್ಸು ತುಂಬ ಖುಷಿ ಕೊಟ್ಟದ್ದು ಸುಳ್ಳಲ್ಲ.

ಚಾರಣಗಳು ಯಾವಾಗಲೂ ನನಗೆ ಮಾನವ ನಿರ್ಮಿತ ಜಗತ್ತಿನಿಂದ ದೂರಾಗಿ, ಪ್ರಕೃತಿಯ ಮಡಿಲಲ್ಲಿ ಬದುಕುವ ಪಾಠವನ್ನು ಕಲಿಸುತ್ತವೆ. ಇನ್ನೊಂದು ಇಂಥದೇ ಸುಂದರ ಚಾರಣಕ್ಕೆ ಎದುರು ನೋಡುತ್ತಿರುವ...

ನಿಮ್ಮವ,
ಕಿರಣ್  

ಚಿತ್ರಗಳು:
|| ಕಿರಣ್ ರಾಜ್ ||
|| ಮಹೇಶ್ ಮಲ್ನಾಡ್ ||