Follow on Twitter

Search it

Saturday 11 February 2012

ಚಾರಣಕ್ಕೂ ಮುನ್ನ ಒಮ್ಮೆ ಓದಿ...


ಕುಮಾರ ಪರ್ವತದಂತೆ..ಒಂಭತ್ತು ಗುಡ್ಡ ಕೂಡಾ ಎಲ್ಲಾ ಟ್ರೆಕರ್ಸ್ ಗಳು ಒಂದಲ್ಲ ಒಂದು ವೀಕೆಂಡ್ ಚಾರಣ ಮಾಡಬಯಸುವ ತಾಣ. ಅಲ್ಲಿನ ನಿಸರ್ಗ ಎಷ್ಟು ರಮಣೀಯವೋ ಅಷ್ಟೇ ನಿಗೂಢತೆಯಿಂದ ಕೂಡಿದೆ. ಅದೇ ನಿಗೂಢತೆ, ದಟ್ಟ ಕಾಡಿನ ಪರಿಸರದಿಂದಾಗಿ ಇಂದಿಗೂ ಅಲ್ಲಿ ಜೀವ ಸಂಕುಲ ನೆಮ್ಮದಿಯಿಂದ ಇದೆ. ಆದರೆ, ಚಾರಣದ ನೆನಪಲ್ಲಿ ಮೋಜು ಮಸ್ತಿಗಿಳಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಟ್ರಿಕ್ಕಿಂಗ್ ಮನಸ್ಸಿಗೆ  ಮುದ ನೀಡುವುದಲ್ಲದೆ ಮನಸನ್ನು ಜಾಗೃತ ಸ್ಥಿತಿಯಲ್ಲಿ ಇರುವಂತೆ ಮಾಡುತ್ತದೆ.

ಬಿಎಂಎಸ್ ಕಾಲೇಜಿನ ವಿದ್ಯಾರ್ಥಿ ಸಾವಿನ ನಂತರ ಒಂದಷ್ಟು ಕಾಲ ಕನಿಷ್ಠವೆಂದರೂ ಆರು ತಿಂಗಳು ಕಾಲ ಅರಣ್ಯದಲ್ಲಿ ನಗರವಾಸಿಗಳ ಸುಳಿವಿರುವುದಿಲ್ಲ. ಸ್ಥಳೀಯ ಯುವಕರು ಕಾಡಲ್ಲಿ ಅಲೆದರೂ ಅದು ಟೆಕ್ಕಿಂಗ್ ಎನಿಸುವುದಿಲ್ಲ ಹಾಗಾಗಿ ಅರಣ್ಯ ಇಲಾಖೆ ಕಠಿಣ ಕ್ರಮ ತಾತ್ಕಾಲಿಕವಾಗಿ ಒಂದಷ್ಟು ಕಾಲಘಟ್ಟದ ನಂತರ ಮುರಿದು ಬೀಳುತ್ತೆ.

ಯಾವುದೇ ಚಾರಣವಾದರೂ ಪೂರ್ವ ತಯಾರಿ ಇಲ್ಲದೆ ಹೋಗುವುದು ಬುದ್ಧಿವಂತರ ಲಕ್ಷಣವಲ್ಲ, ಅಲ್ಲದೆ ಅಪಾಯಕಾರಿ ಕೂಡಾ. ಎಷ್ಟೋ ಬೆಟ್ಟ ಗುಡ್ಡ ಸುತ್ತಿ ಬಂದಿದ್ದರೂ ಹೊಸದೊಂದು ಬೆಟ್ಟ ಹತ್ತಲು ಹೊರಟಾಗ ಅನುಭವಿ ಟ್ರೆಕ್ಕರ್ಸ್ ಗಳ ಹಿತನುಡಿ ಕೇಳುವುದು ವಾಡಿಕೆ. ಅದು ಅವಶ್ಯ ಕೂಡಾ. ಬೆಂಗಳೂರಿನಲ್ಲಿ ಈಗ ಟ್ರೆಕ್ ಆಯೋಜಿಸುವ ಸಂಸ್ಥೆಗಳಿಗೇನು ಕಮ್ಮಿಯಿಲ್ಲ. ಬಿಎಂಸಿ ಆಗಲಿ, ಬೆಂಗಳೂರು ಅಸೆಂಡರ್ಸ್ ಸಂಸ್ಥೆಗಳಾಗಲಿ ಅಥವಾ ಪರಿಸರ ಪ್ರೇಮಿ ಅರುಣ್, ರಾಜೇಶ್ ನಾಯ್ಕರಂಥ ಅನುಭವಿಗಳಾಗಲಿ ಚಾರಣ ಪ್ರಿಯರಿಗೆ ಅಗತ್ಯ ಮಾಹಿತಿ, ಸಲಹೆ ನೀಡುತ್ತಾ ಬಂದಿದ್ದಾರೆ.

ಪ್ರಕೃತಿಯ ದೈತ್ಯಶಕ್ತಿಯ ಮುಂದೆ ನಾವು ತೃಣಕ್ಕೆ ಸಮಾನ ಎಂಬ ಸಮಾನ್ಯ ಕಲ್ಪನೆ ಚಾರಣಿಗರಿಗೆ ಇದ್ದರೆ ಒಳ್ಳೆಯದು. ಇನ್ನು ಟ್ರೆಕ್ ಮಾಡಬೇಕಾದ ಪರಿಸರದ ಸ್ಥೂಲ ಸೂಕ್ಷ್ಮ ಪರಿಕಲ್ಪನೆ ಕೂಡಾ ಮುಖ್ಯ. ಟ್ರೆಕ್ ಗೆ ಹೋಗುವ ಮೊದಲು ಮನೆಯವರ ಅನುಮತಿ ಅಗತ್ಯ. ಆ ಪ್ರದೇಶದಲ್ಲಿ ತಿರುಗಾಡಲು, ನೆಲೆಸಲು ಅರಣ್ಯ ಇಲಾಖೆ ಅನುಮತಿ ಇದೆಯೇ? ಯಾವ ಕಾಲದಲ್ಲಿ ಹೋಗಬಹುದು? ಎಂಬುದನ್ನು ನೋಟ್ ಮಾಡಿಕೊಳ್ಳಬೇಕು. ಸಾಮಾನ್ಯವಾಗಿ ಅರಣ್ಯ ಇಲಾಖೆ ಅನುಮತಿ ಇಲ್ಲದೆ ಕಾಡಿನಲ್ಲಿ ಒಂದು ಮರದ ತೊಗಟೆ ಕೀಳುವುದು ಅಪರಾಧ. ಇದು ಟ್ರೆಕರ್ಸ್ ಗಳಿಗೆ ಮಾತ್ರವಲ್ಲ. ಕಾಡಿನ ಆಸುಪಾಸಿನಲ್ಲಿ ನೆಲೆಸಿರುವ ಜನರಿಗೂ ಅನ್ವಯಿಸುತ್ತದೆ. ಮನೆ ಮುಂದಿನ ಮರ ಕಡಿದು ಕಿಟಕಿ ಬಾಗಿಲಿಗೆ ಹೊಂದಿಸುವುದು ಕಷ್ಟ. ಅನುಮತಿ ಇಲ್ಲದೆ ಕಾಡಿನಲ್ಲಿ ಅಲೆಯುವಂತಿಲ್ಲ.

ಏನು ಮಾಡಬೇಕು?: ಮಲ್ಲೇಶ್ವರಂ ಬಳಿ ಅರಣ್ಯ ಭವನದಲ್ಲಿ ಟ್ರೆಕ್ ಟೀಮ್ ಬಗ್ಗೆ ಮಾಹಿತಿ ದಾಖಲಿಸಿ ಅನುಮತಿಗೆ ವಿನಂತಿಸಬಹುದು. ಬ್ಲಾಗ್, ಗೂಗಲ್ ಅಥವಾ ಮೇಲೆ ಹೇಳಿದ ಸಂಸ್ಥೆ ಅಥವಾ ವ್ಯಕ್ತಿಗಳ ಸಹಾಯ ಪಡೆದು ಸೂಕ್ತ ಮಾರ್ಗದರ್ಶನ ಪಡೆದು ಮುನ್ನಡೆಯಬಹುದು. ಗೈಡ್ ಇಲ್ಲದೆ ದುರ್ಗಮ ಅರಣ್ಯ ಪ್ರದೇಶಕ್ಕೆ ಕಾಲಿಡುವುದು ಒಳ್ಳೆಯದಲ್ಲ. ಪ್ರತಿ ಗುಂಪಿನಲ್ಲೂ ನುರಿತ ಚಾರಣಿಗರಿಬ್ಬರನ್ನು ಆರಿಸಬೇಕು. ಒಬ್ಬ ಮುಂಬದಿಯಲ್ಲಿ ಗೈಡ್ ಜೊತೆ ಸಾಗುತ್ತಿದ್ದರೆ ಉಳಿದವರನ್ನು ಇನ್ನೊಬ್ಬ ಗುಂಪಿನ ಹಿಂಬದಿಯಿಂದ ಹುರಿದುಂಬಿಸುತ್ತಾ ಮುಂದಕ್ಕೆ ಕರೆದೊಯ್ಯಬೇಕು.

ಗೈಡ್, ರೂಟ್ ಮ್ಯಾಪ್, ಜಿಪಿಎಸ್ ಸಾಧನ, ಬೈನ್ಯಾಕುಲರ್ಸ್, ಒಂದೊಳ್ಳೆ ಜೊತೆ ಶೂ, ಬಣ್ಣದ ಅಂಗಿಗಳು(ಕಳೆದು ಹೋದಾಗ ಹುಡುಕಲು ಅನುಕೂಲಕರ!), ಟೆಂಟ್, ಸ್ಲೀಪಿಂಗ್ ಬ್ಯಾಗ್, ಅಡುಗೆ ಸಾಧನಗಳು, ಸ್ವಿಸ್ ನೈಫ್, ಹಗ್ಗ, ಸಣ್ಣ ಕತ್ತಿ, ಕ್ಯಾಪ್, ನೀರನ ಬಾಟಲಿ, ಲೈಟರ್, ಟಾರ್ಚುಗಳು, ದಿಕ್ಸೂಚಿ, ಫಸ್ಟ್ ಎಡ್ ಕಿಟ್, ..ಪಟ್ಟಿ ದೊಡ್ಡ ದಾಗುತ್ತದೆ. ಜೊತೆಗೆ ನೆಟ್ವರ್ಕ್ಸ್ ಸಿಗಬಲ್ಲ ಮೊಬೈಲ್, ವಾಕಿಟಾಕಿ ಕೂಡಾ ಅವಶ್ಯ ಎನಿಸುತ್ತದೆ. ಆದರೆ, ಸಮಯಪ್ರಜ್ಞೆ ಎಂಬ ಮಹತ್ಸಾಧನ ಬೇಕೇ ಬೇಕು.

ಆದರೆ, ಮುಖ್ಯವಾಗಿ ಶಿರಾಡಿ ಘಾಟಿನಿಂದ ಮೂಡಿಗೆರೆ ತನಕ ಹಾದುಕೊಂಡಿರುವ ಅರಣ್ಯದಲ್ಲಿ ಅನೇಕ ಕಡೆ ಮೊಬೈಲ್ ಸಂಪರ್ಕ ಸಿಗುವುದಿಲ್ಲ. ಆಗ ಜೊತೆಗೆ ಕರೆದೊಯ್ಯುವ ಮಾರ್ಗದರ್ಶಿಯ ನಿರ್ದೇಶನವನ್ನೇ ಅನುಸರಿಸಬೇಕಾಗುತ್ತದೆ. ಸರ್ವೇ ಆಫ್ ಇಂಡಿಯಾದವರು ಈ ಅರಣ್ಯ ಪ್ರದೇಶಗಳ ವಿವರಣಾತ್ಮಕ ನಕಾಶೆ ಕಡಿಮೆ ಬೆಲೆಗೆ ನೀಡುತ್ತಾರೆ. ಆದರಲ್ಲಿ(ಮ್ಯಾಪ್ ಸಂಖ್ಯೆ 48/p/9/nw) ಒಂಭತ್ತು ಗುಡ್ಡ ಅಲ್ಲದೆ, ಪಾಂಡವರ ಗುಡ್ಡ, ದೀಪದ ಕಲ್ಲು, ಜೇನುಕಲ್ಲು ಬೆಟ್ಟ, ಸಿಸಿಲಕಲ್ ಬೆಟ್ಟ, ಅಮೇದಿಕಲು ಬೆಟ್ಟ, ರಕಾಸ್ಕಲ್ ಬೆಟ್ಟ, ಕುಂಜನಕೆರೆ ಬೆಟ್ಟ, ಮಾರನಕೆರೆ ಗುಡ್ಡ..ಇತ್ಯಾದಿ ಸಿಗುತ್ತದೆ 597 ಮೀ ಎತ್ತರದಿಂದ 1197 ಮೀಟರ್ ತನಕ ಪರ್ವತ ಶ್ರೇಣಿ ಇದೆ. ಇಲ್ಲಿ ಆನೆ, ಹುಲಿ, ಚಿರತೆ, ಕಾಟಿ, ಕಬ್ಬೆಕ್ಕು, ಕಾಡು ನಾಯಿ..ಇತ್ಯಾದಿ ವನ್ಯಜೀವಿಗಳ ದರ್ಶನ ಭಾಗ್ಯ ಸಿಗಬಹುದು.

ಚಾರಣದಲ್ಲಿ ಅನೇಕ ನಿಸರ್ಗ ನಿರ್ಮಿತ ಜಲಪಾತಗಳು ಹೊಂಡಗಳು, ಅಡ್ಡಹೊಳೆ, ಆತ್ತ ಕಡೆ ಕೆಂಪುಹೊಳೆ ಸೇರಿದಂತೆ ಸಣ್ಣಪುಟ್ಟ ಝುರಿಗಳು ಕಣ್ಮನ ಸೆಳೆಯುತ್ತದೆ. ಆದರೆ, ಅಷ್ಟೇ ಅಪಾಯಕಾರಿ ಕೂಡಾ. ಇದನ್ನೆಲ್ಲ ಅರಿತಿರುವ ಸರ್ವೇ ಆಫ್ ಇಂಡಿಯಾ ಹಾಗೂ ಅರಣ್ಯ ಇಲಾಖೆ ಅವರು map 48ರ ಅಕ್ಕ ಪಕ್ಕದ ಭಾಗಗಳನ್ನು ಸಾರ್ವಜನಿಕರಿಗೆ ನೀಡುವುದನ್ನು ನಿಲ್ಲಿಸಿದ್ದಾರೆ. ರಕ್ಷಿತಾರಣ್ಯ ಎನ್ನಿಸಿರುವುದರಿಂದ ಹಾಗೂ ಕಾಡಿನ ಸಂಪತ್ತು ಲೂಟಿ ಮಾಡುವವರನ್ನು ಹತ್ತಿಕ್ಕಲು ಆ ಭಾಗದಲ್ಲಿ ಅರಣ್ಯ ಇಲಾಖೆ ಪಡೆ ಕಾವಲು ಕಾಯಬೇಕಾದ್ದರಿಂದ ಅನೇಕ ಬೆಟ್ಟ ತಪ್ಪಲಿಗೆ ಚಾರಣ ನಿಷೇಧಿಸಲಾಗಿದೆ.

ನಕ್ಸಲರ ಓಡಾಟವಿರುವ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಲ ಬೆಟ್ಟ ಗುಡ್ಡ ಅರಣ್ಯಗಳಲ್ಲಿ ಚಾರಣ ನಿಷೇಧಿಸಿ ಅನೇಕ ವರ್ಷಗಳಾಗಿದೆ. ಇನ್ನೂ ಅನೇಕ ಕಡೆ ಅರಣ್ಯ ಇಲಾಖೆ ಅನುಮತಿ ನೀಡಿದರೂ ನಿಗಿದಿತ ವೇಳೆಯಲ್ಲಿ ಅರಣ್ಯದ ಸರಹದ್ದು ದಾಟುವಂತೆ ಕಟ್ಟಪ್ಪಣೆ ವಿಧಿಸಲಾಗುತ್ತದೆ. ಆದರೆ, ಆಗುತ್ತಿರುವುದೇ ಬೇರೆ ಅರಣ್ಯದ ನಿಯಮ ಮುರಿಯುವುದರಲ್ಲಿ ಟ್ರೆಕರ್ಸ್ ಅಲ್ಲದೆ ಇಲಾಖೆಯ ಕೆಲವರು ನಿರ್ಲಕ್ಷ್ಯ ತೋರುತ್ತಿರುವುದು ಆಗಾಗ ಪ್ರಾಣಹಾನಿಗೆ ಎಡೆ ಮಾಡುತ್ತಿದೆ.

ಇದಕ್ಕೆ ಪರಿಹಾರವೇ ಇಲ್ಲವೆ? : ಮೊದಲಿಗೆ ಟ್ರೆಕ್ಕಿಂಗ್ ತಾಣಗಳನ್ನು ಗುರುತಿಸುವ ಅಗತ್ಯತೆ ಇದೆ. ಹಾಗೆ ಗುರುತಿಸಿದ ತಾಣಗಳಿಗೆ ಬೇರೆ ಯಾವ ಸೌಲಭ್ಯಗಳನ್ನು ಒದಗಿಸದೆ ಸೂಕ್ತ ಮಾರ್ಗದರ್ಶಿಯನ್ನು ಟ್ರೆಕರ್ಸ್ ಜೊತೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಇದನ್ನು ಅರಣ್ಯ ಇಲಾಖೆ ಅಥವಾ ಸರ್ಕಾರ ನೇರವಾಗಿ ಅಥವಾ ಸರ್ಕಾರೇತರ ಸಂಸ್ಥೆಗಳ ಜೊತೆ ಕೈ ಜೋಡಿಸಿ ಒಂದು ವ್ಯವಸ್ಥೆ ರೂಪಿಸಬಹುದು. ಟ್ರೆಕ್ಕಿಂಗ್ ವೆಚ್ಚ, ಮೋಜು ಮಸ್ತಿಗೆ ಕಡಿವಾಣ ಎಲ್ಲವೂ ಮಾರ್ಗದರ್ಶಿಯ ಹೊಣೆಯಾಗಿರುತ್ತದೆ.

ವೃತ್ತಿಪರ ಟ್ರೆಕ್ ಸಂಸ್ಥೆಗಳ ಜೊತೆ ಹೋದರೆ ಸಂಸ್ಥೆಯೇ ನಿಮ್ಮ ಎಲ್ಲಾ ಜವಾಬ್ದಾರಿಯನ್ನು ಹೊರುತ್ತದೆ. ಹಾಗಾಗಿ ಹೆಚ್ಚಿನ ತೊಂದರೆ ಇರುವುದಿಲ್ಲ. ಆದರೆ, ವೈಯಕ್ತಿಕವಾಗಿ ಸ್ನೇಹಿತರ ಗುಂಪು ಕಟ್ಟಿಕೊಂಡು ಹೋಗಿ ಮದ್ಯಪಾನ, ಮೋಜಿನಾಟ ಮಾಡಬಯಸಿದರೆ ಕಷ್ಟ ಕಷ್ಟ. ಪ್ರತಿ ಟ್ರೆಕರ್ಸ್ ಗಳ ಹೆಸರು ನಮೂದಿಸಿ, ಶುಲ್ಕ ಪಡೆಯುವಾಗ ಅರಣ್ಯ ಇಲಾಖೆ ತೋರುವ ಆಸಕ್ತಿಯನ್ನು ಟ್ರೆಕರ್ಸ್ ಗಳಿಗೆ ಕಾಡಿನಲ್ಲಿ ಅಲೆದಾಡುವಾಗ ಪಾಲಿಸಬೇಕಾದ ಮುಂಜಾಗ್ರತೆ ಬಗ್ಗೆ ತೋರಿಸಿದರೆ ಹುಡುಗು ಬುದ್ಧಿಯ ಯುವಕರ ಪ್ರಾಣ ಮಾನ ತಪ್ಪಿಸಬಹುದು.

ಚಾರಣ ಮಾಡುವುದು ತಪ್ಪಲ್ಲ .ಆದರೆ, ಪೂರ್ವ ತಯಾರಿ ಇಲ್ಲದೆ, ಮಾರ್ಗದರ್ಶನವಿಲ್ಲದೆ ಹುಂಬತನದಿಂದ ಪ್ರಕೃತಿ ಜೊತೆ ಸೆಣಸಾಟಕ್ಕೆ ಇಳಿದರೆ ಅರಣ್ಯ ಇಲಾಖೆಯಾಗಲಿ, ಆರಕ್ಷಕರಾಗಲಿ ಏನೂ ಮಾಡಲಾಗದು. ಪರಿಸರ ಪ್ರಜ್ಞೆ ಪಾಠ ಕಲಿತು ನಂತರ ಕಾಡಿನಲ್ಲಿ ಕಾಲಿಡಿ.
[ಈ ಲೇಖನ ವಿಜಯಕರ್ನಾಟಕ Next ಪತ್ರಿಕೆಯಲ್ಲಿ ಫೆ. 10 ರಂದು ಪ್ರಕಟವಾಗಿದೆ]