Follow on Twitter

Search it

Saturday 21 January 2012

ಜೇನುಕಲ್ ಗುಡ್ಡ ಚಾರಣಕ್ಕೂ ಮುನ್ನ...ಭಾಗ 2

ಜೇನುಕಲ್ ಗುಡ್ಡ ಚಾರಣಕ್ಕೂ ಮುನ್ನ...ಭಾಗ 1ಮುಂದುವರೆದುದು....
ಬಸ್ ಪುರಾಣ: ಯಾವುದೋ ಬಸ್ ಹತ್ತಿ ಇಳಿದು ನಾವು ಬುಕ್ ಮಾಡಿದ ಸೀಟು ಇದ್ದ ಬಸ್ ಹಿಡಿದು ಕೂತಿದ್ದಷ್ಟೇ ಗೊತ್ತು. ಗಂಟೆ ಎರಡು ಕಳೆದರೂ ಗೋಪಿ, ಶ್ರುತಿ, ಅಶ್ವಲ್, ನೂರು ವರ್ಷ ಹೊಸ್ತಿಲಲ್ಲಿದ್ದ ತಮ್ಮ ಕಂಪನಿ ಬಗ್ಗೆ ಅವಿರತವಾಗಿ ಹರಟೆ ಹೊಡೆಯುತ್ತಿದ್ದರು.

ನಾನು ಇವರ ಮಾತು ಮಾತಿನ ಸರಣಿ ಮುರಿಯಲು ಜೋರಾಗಿ ಆಕಳಿಸಿ, ಕೆಮ್ಮಿದ್ದು ಪ್ರಯೋಜನಕ್ಕೆ ಬರಲಿಲ್ಲ. ಮುಂದಿನ ಸೀಟಿನಲ್ಲಿ ಕೂತಿದ್ದ ತ್ರಿಮೂರ್ತಿಗಳಾದ ರವಿ, ಪುಂಡಿ, ಕಿಟ್ಟು ಸೈಲೆಂಟ್ ಗೆ ಶರಣಾಗಿದ್ದರು. ನಾನು ಹಾಸನ ಆದಮೇಲೆ ನಿದ್ದೆ ಮಾಡಲು ಯತ್ನಿಸಿದೆ ಆದ್ರೆ, ಬೇಲೂರಿನ ನಂತರ ಕಣ್ಣು ಮುಚ್ಚಿ ಕೂರುವುದಿರಲಿ, ಸೀಟಿನಲ್ಲಿ ಕ್ಷಣಕಾಲ ತಳವೂರಲು ಆಗಲಿಲ್ಲ. ಡ್ರೈವರ್ ಗೆ ಏನು ಅರ್ಜೆಂಟ್ ಕೆಲ್ಸ ಇತ್ತೋ ಗೊತ್ತಿಲ್ಲ. ಯರ್ರಾಬಿರ್ರಿ ಗಾಡಿ ಓಡಿಸುತ್ತಿದ್ದ. ಅವನ ವೇಗಕ್ಕೆ ತಕ್ಕಂತೆ ರಸ್ತೆ ಕೂಡಾ ತಾಳ ಹಾಕುತ್ತಿತ್ತು.

5.45ಕ್ಕೆ ಮೂಡಿಗೆರೆ ಬಸ್ ನಿಲ್ದಾಣ ಬಳಿ ಇಳಿದಾಗ ಚಳಿ ನಮ್ಮನ್ನು ತಬ್ಬಿಕೊಂಡು ಸ್ವಾಗತಿಸಿತ್ತು. ಪಕ್ಕದಲ್ಲಿದ್ದ ಸಣ್ಣ ಹೋಟೆಲ್ ನಲ್ಲಿ ಕಾಫಿ ಕುಡಿಯಲು ಮನಸ್ಸಾಯ್ತು. ಆದರೆ, ಅದಕ್ಕೂ ಮುನ್ನ ವಿಸ್ಮಯ ಪ್ರತಿಷ್ಠಾನದ ಬಾಪು ದಿನೇಶ್ ಹಾಗೂ ಮಗ್ಗಲಮಕ್ಕಿ ಗಣೇಶ್ ಗೆ ಕಾಲ್ ಮಾಡಿ ಅವರ ಸುಖ ನಿದ್ರೆ ಹಾಳು ಮಾಡಿ ನಮ್ಮನ್ನು ಹೊತ್ತೊಯ್ಯುವ ಡ್ರೈವರ್ ಬಗ್ಗೆ ವಿಚಾರಿಸಿದೆ.

ಎಲ್ಲರೂ ಇಡ್ಲಿ..ಕಾಫಿ ತಿನ್ನುತ್ತಾ ಬಿಳಿ ಕಲರ್ ಸುಮೋ ಗಾಡಿ ನಿರೀಕ್ಷೆಯಲ್ಲಿದ್ದೆವು. ಆ ಬಂದಿದ್ದೆ ಬಿಳಿ ಬಣ್ಣದ ಟಾಟಾ ಸುಮೋ ಮತ್ತದರ ಚಾಲಕ ದಿ ಗ್ರೇಟ್ ಎಂಟರ್ ಟೈನರ್ ಜೂಲಿಯನ್ ಫರ್ನಾಂಡಿಸ್. ಮೂಡಿಗೆರೆಯ ಅಘೋಷಿತ ವಕ್ತಾರನಂತಿರುವ ಐದೂವರೆ ಅಡಿಯ ಎತ್ತರದ ಗುಂಡನೆ ದೇಹಾಕೃತಿ ಜೊತೆ ಮಾತಿಗಿಳಿದರೆ ಹೊತ್ತು ಹೋಗುವುದೇ ಗೊತ್ತಾಗುವುದೇ ಇಲ್ಲ.

ಮೂಡಿಗೆರೆಯ ಬದಲಾಗುತ್ತಿರುವ ವಾತಾವರಣ, ಎಸ್ಟೇಟ್ ಓನರ್ ಗಳು, ಹೈಟೆಕ್ ಕೂಲಿಗಳು, ರಾಜಕಾರಣಿಗಳು ಹಾಗೂ ಅವರ ಹಿಂಬಾಲಕರು.. ಹೀಗೆ ಪುಂಖಾನುಪುಂಖವಾಗಿ ಆತ ಹೇಳುತ್ತಿದ್ದರೆ ಮುಂಜಾನೆ ಆಕಾಶವಾಣಿ ಭದ್ರಾವತಿ ಸ್ಟೇಷನ್ ವಾರ್ತಾ ಪ್ರಸಾರ ನೆನಪಾಗುತ್ತಿತ್ತು. ಹಿಂಬದಿ ಕೂತಿದ್ದ ನನ್ನ ನಿದ್ದೆಯನ್ನು ಆತನ ಡೈಲಾಗ್ ಗಳು ಬಡಿದೆಬ್ಬಿಸುತ್ತಿತ್ತು.

ಹಳೆ ಮೂಡಿಗೆರೆ ಹತ್ತಿರ ಡಬಲ್ ಸ್ಟಾರ್ ಮನೆ ಎಂದರೆ ಎಲ್ಲರಿಗೂ ಗೊತ್ತು. ಅಲ್ಲಿ ಬಂದು ಫರ್ನಾಂಡೀಸ್...ಜೂಲಿಯನ್ ಫರ್ನಾಂಡೀಸ್ ಎಂದರೆ ಯಾರೋ ಬೇಕಾದರೂ ಮನೆ ತೋರಿಸುತ್ತಾರೆ. ಒಬ್ಬ ಮಗಳು, ಒಬ್ಬ ಮಗ..ಮಗ ಕಾಲೇಜಿನಲ್ಲಿ ಲೆಕ್ಚರರ್..ಮಗಳು ..ಓದಿದ್ದಾಳೆ.. ಈಗ ಮನೆಗೆ ಬಂದಿದ್ದಾಳೆ..ಎರಡನೇ ಮಗು ಎಕ್ಸ್ ಪೆಕ್ಟ್ ಮಾಡ್ತಾ ಇದ್ದಾಳೆ.

ಕ್ರಿಸ್ ಮಸ್ ಗೆ ಬಂದಿದ್ದು ಅವಳು...ನ್ಯೂ ಇಯರ್ ಡೇ ಭರ್ಜರಿಯಾಗಿ ಸೆಲೆಬ್ರೇಟ್ ಮಾಡ್ತೀವಿ. ಹಬ್ಬ ಅಂದ್ರೆ ಎಲ್ಲಾ ಇಲ್ಲಿಗೆ ಬಂದುಬಿಡ್ತಾರೆ. ಆದರೆ ನಾನು ಯಾರ ಮೇಲೂ ಡಿಪೆಂಡ್ ಆಗಿಲ್ಲ.ಈಗ ಸ್ವಲ್ಪ ಕಣ್ಣಿನ ಪ್ರಾಬ್ಲಂ ಆಗಿತ್ತು. ಆಪರೇಷನ್ ಮಾಡಿಸಿಕೊಂಡಿದ್ದೀನಿ.

ಬರೀ ಇಲ್ಲೆ ಓಡಿಸುತ್ತೀನಿ ಅಷ್ಟೇ .. ಜಾಸ್ತಿ ದೂರ ಹೋಗೋಲ್ಲ. ಹೆಚ್ಚೆಂದರೆ ಈ ಕಡೆ ಮಂಗಳೂರು.. ಆ ಕಡೆ ಚಿಕ್ಕಮಗಳೂರು ಕಡೆ ಓಡಿಸ್ತೀನಿ ಅಷ್ಟೇ. ಎಂದು ಹೇಳಿದವನು ಕೆಲ ಕಾಲ ಸುಮ್ಮನಾದ..ಆಮೇಲೆ ಮೆಲ್ಲಗೆ ನಿಮ್ಮಲ್ಲಿ ಯಾರಾದರೂ ಡ್ರಿಂಕ್ಸ್ ಮಾಡ್ತೀರಾ ಎಂದ. ಇದು ಯಾವ ರೀತಿ ಆಫರ್ ಬೆಳ್ಳಂಬೆಳ್ಳಗೆ ಎಂದು ನಮ್ಮಲ್ಲಿ ಕೆಲವರಿಗೆ ಅನ್ನಿಸಿತು.

ಹೂಂ..ಹಾ.. ಅನ್ನುತ್ತಿದ್ದಂತೆ ಉತ್ತೇಜನಗೊಂಡ ಫರ್ನಾಂಡೀಸ್ ಮತ್ತೆ ಮಾತು ಶುರು ಮಾಡ್ಕೊಂಡ. ಒಂದ್ಸಾರಿ ಏನಾಯ್ತು ಗೊತ್ತಾ.. ಇಲ್ಲೇ ನಮ್ಮ ಜಾವಳಿ ಕಡೆ ಸಾವಕಾರ ಮಗ ಮತ್ತೆ ಅವನ ಫ್ರೆಂಡ್ರು ಮಂಗಳೂರಿಗೆ ಕರ್ಕೋಂಡು ಹೋಗಿ ಬರ್ಬೇಕಿತ್ತು. ಊರು ಬಿಟ್ಟು ಸ್ವಲ್ಪ ದೂರ ಹೋಗುತ್ತಿದ್ದಂತೆ.. ಅಂಕಲ್ ಅಂದ ಸಾಹುಕಾರರ ಮಗ,
ನಾನು ಓಡಿಸ್ಲಾ ಗಾಡಿ ಎಂದ
೨೦ ವರ್ಷದಿಂದ ಗಾಡಿ ಓಡಿಸ್ತೀದಿನಿ ಸಾರ್...ಒಮ್ಮೆ ಕೂಡಾ ಬೇರೆ ಅವರಿಗೆ ಗಾಡಿ ಕೊಟ್ಟಿಲ್ಲ. ಆದ್ರೆ ಕೇಳ್ತಾ ಇರೋದು ಸಾಹುಕಾರರ ಮಗ ಎನ್ ಮಾಡೋಡೂ
ಧೈರ್ಯ ಮಾಡಿ ಕೊಟ್ಟೆ....
ಆದ್ರೆ ಆನಾಹುತ ಆಗ್ಬಿಡ್ತು..ನಮ್ ಸಾಹುಕಾರರ ಮಗ ಮರಕ್ಕೆ ಹೋಗಿ ಗುದ್ದು ಬಿಟ್ಟ.

ಫುಲ್ ಟೆನ್ಷನ್ ಆಗಿಬಿಡ್ತು..ಅವತ್ತೇ ಡಿಸೈಡ್ ಮಾಡಿದೆ ಯಾರಿಗೂ ಗಾಡಿ ಕೊಡ್ಬಾರ್ದು ಅದರಲ್ಲೂ ಕುಡಕರಿಗೆ ..

ನೀವು ಡ್ರಿಂಕ್ಸ್ ಮಾಡೊಲ್ವ..
ನಾನು ಡ್ರಿಂಕ್ಸ್ ಮಾಡ್ತೀನಿ ಸಾರ್ ಆದ್ರೆ ಮನೆಯಲ್ಲಿ ಫ್ಯಾಮಿಲಿ ಎಲ್ಲಾ ಸೇರಿದ್ರೆ ಮಾತ್ರ
ಆದರೆ, ಡ್ರಿಂಕ್ಸ್ ಮಾಡಿ ಎಂದು ಗಾಡಿ ಓಡಿಸಲ್ಲ.
ಆ ಹುಡುಗರ ಕಥೆ ಏನಾಯ್ತು
ಸಾಹುಕಾರರು ಬಂದ್ರು ಅವರ ಮಗನ ಕಾಲಿಗೆ ಸ್ವಲ್ಪ ಪೆಟ್ಟಾಗಿತ್ತು. ಬೇರೆ ಕಾರಲ್ಲಿ ಬಂದು ಕರೆದುಕೊಂಡು ಹೋದ್ರು
ನಾನು ಗಾಡಿ ರಿಪೇರಿ ಮಾಡಿಸಿಕೊಂಡು ಆಮೇಲೆ ಬಂದೆ...

ಅಷ್ಟರಲ್ಲಿ ಮೂಡಿಗೆರೆ ಬಿಟ್ಟು ಸುಮಾರು ೨೦ ಕಿ.ಮೀ ದಾಟಿದ್ವಿ..ಹಿಂದೆ ಸೀಟಲ್ಲಿ ಕೂತು ತೂಕಡಿಸುತ್ತಿದ್ದ ನಂಗೆ ಎಚ್ಚರವಾಗುವಷ್ಟು ರಸ್ತೆ ಹಾಳಾಗಿತ್ತು. ಥೂ ಏನ್ ರಸ್ತೇನೋ ಎಂದು ನನ್ನ ಬಾಯಲ್ಲಿ ಬರುವಷ್ಟರಲ್ಲಿ
ಫರ್ನಾಂಡೀಸ್ ಸಾಹೇಬ್ರ ಮಾತಿನ ಓಟ ರಸ್ತೆಗೆ ಇಳಿದುಬಿಟ್ಟಿತು.

ಸ್ವಲ್ಪ ದೂರ ಅಷ್ಟೇ ಹೀಗೆ ಮುಂದೆ ಒಂದು ಅದ್ಭುತ ರಸ್ತೆ ನೋಡ್ತೀರಾ ನೀವು ಹೇಗೆದೆ ಗೊತ್ತಾ ಅದು?

ಅತ ಹೇಳಿದ ರೇಂಜ್ ನೋಡಿದರೆ ನೈಸ್ ರಸ್ತೆ ಥರಾ ಮೂಡಿಗೆರೆ ಸಕಲೇಶಪುರ ಲಿಂಕ್ ರಸ್ತೆ ಏನಾದರೂ ಇರಬಹುದು ಅನ್ನಿಸಿತ್ತು.

ಆದರೆ, ಹತ್ತಿರ ಹತ್ತಿರವಾದಂತೆ ಕಣ್ಣರಳಿ ಎಡಬಲ ನೋಡ ತೊಡಗಿದೆವು. ಆ ರೋಡ್ ನಮ್ಮ ಎಡಕ್ಕೆ ಇತ್ತು ಅದನ್ನು ಹಾದು ಮುಂದಕ್ಕೆ ಹೋದ್ವಿ..

ಎಲ್ಲಿ ರೋಡ್ ಎಂದು ಸ್ವಲ್ಪ ಮುಂದೆ ಹೋದ ಮೇಲೆ ಕೇಳಿದ್ದಕ್ಕೆ ಅಲ್ಲೇ ಎಡ ಕಡೆ ಹೋಯ್ತಲ್ಲ ಸಾರ್.. ಅದೇ ಅಂದ ನಮಗೆ ನಗಬೇಕೋ ಬೆಳ್ಳಂಬೆಳ್ಳಗೆ ಮಾತಿನ ಝರಿ ಹರಿಸುತ್ತಿದ್ದ ಫರ್ನಾಂಡೀಸ್ ಗೆ ಬೈಯಬೇಕೋ ತಿಳಿಯದೇ ಓಹ್ ಹೌದಾ ಎಂದು ಉದ್ಗಾರ ತೆಗೆದು ಸುಮ್ಮನಾದೆವು. ಏಕೆಂದರೆ ಆ ರಸ್ತೆ ಪರಿಸ್ಥಿತಿ ನಮ್ಮ ಕುತೂಹಲವನ್ನು ಅಣಕಿಸುವಂತ್ತಿತ್ತು.

ಮತ್ತೆ ತನ್ನ ಮನೆ ಕಥೆ ಹೇಳಲು ಪ್ರಾರಂಭಿಸಿದ ಫರ್ನಾಂಡೀಸ್ ಮುನ್ನೂರ್ ವರ್ಷ ಹಳೆಯದಾದ ಮನೆ, ಲೆಕ್ಚರರ್ ಕೆಲ್ಸ ಮಾಡೋ ಮಗ, ನರ್ಸಿಂಗ್ ಓದಿರೋ ಮಗಳು, ಪತ್ನಿಯ ಅಗಲಿಕೆ, ವಾಹನ ಪ್ರೀತಿ.. ಹೀಗೆ ಎಲ್ಲವನ್ನೂ ಸೀಮಿತ ಅವಧಿಯಲ್ಲೇ ನಮ್ಮ ಮುಂದಿಟ್ಟಿದ್ದ.

ಸುಮಾರು 1 ಗಂಟೆಕಾಲ ನಮ್ಮ ರಂಜನೆ ಮಾಡಿದ ಫರ್ನಾಂಡೀಸ್ ಮರೆಯಲು ಸಾಧ್ಯವಿದ್ದಂತೆ ನಮ್ಮ ಮನಸ್ಸಿನಲ್ಲಿ ಹೊಕ್ಕಿಬಿಟ್ಟ. ಮತ್ತೊಮ್ಮೆ ಫರ್ನಾಂಡೀಸ್ ಗೆ ವಿಷ್ ಮಾಡಿ ಬೀಳ್ಕೊಟ್ಟೆವು.

No comments:

Post a Comment